ಮಂಡ್ಯ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಹಾಗೂ ಸಾಮೂಹಿಕ ಅತ್ಯಾಚಾರ ನಡೆಸಿರುವ ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಪ್ರೊ, ಬಿ ಕೃಷ್ಣಪ್ಪ ಸ್ಥಾಪಿತ ಮೂಲ ಸಂಘಟನೆ ) ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ರವಾನಿಸಿದರು. ಮಣಿಪುರದಲ್ಲಿ ಮೂರು ತಿಂಗಳಿಂದ ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರ ಎಲ್ಲೆ ಮೀರಿದ್ದು ಇದುವರೆಗೆ 165 ಜನ ಮೃತಪಟ್ಟಿದ್ದಾರೆ.
ಕುಕಿ ಜೋ ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರನ್ನು ಸಂಪೂರ್ಣ ಬೆತ್ತಲು ಮಾಡಿ ಪುಂಡರ ಗುಂಪೊಂದು ಲೈಂಗಿಕ ದೌರ್ಜನ್ಯ ನಡೆಸಿದೆ. ಇದು ಹಿಂಸಾಚಾರದ ಕರಾಳ ಮುಖವನ್ನ ತೋರ್ಪಡಿಸಿದೆ. ಇಂತಹ ಹೀನ ಕೃತ್ಯದ ಹೊಣೆಯನ್ನು ಅಲ್ಲಿನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹೊರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹೀನ ಕೃತ್ಯದ ಬಗ್ಗೆ ಯಾವುದೇ ತನಿಖೆ ನಡೆಸದೆ, ಯಾರನ್ನು ಬಂಧಿಸದೆ ಮೌನವಾಗಿದ್ದ ಸರ್ಕಾರದ ನಡೆ ಅನುಮಾನ ಸೃಷ್ಟಿಸಿದೆ, ಅಷ್ಟೇ ಅಲ್ಲದೆ ವಿಶ್ವಗುರು ಎಂದು ಹೇಳುತ್ತಿರುವ ಪ್ರದಾನಿ ನರೇಂದ್ರ ಮೋದಿ ಮೌನ ವಹಿಸಿರುವುದು ಮತ್ತಷ್ಟು ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಿದೆ ಎಂದು ಕಿಡಿಕಾರಿದರು.
ಇನ್ನು ಸುಪ್ರೀಂ ಕೋರ್ಟ್ ನಾಯಮೂರ್ತಿ ಡಿ.ವೈ.ಚಂದ್ರಚೂಡಾ ಅವರು ಹೀನ ಕೃತ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ತಳಮಟ್ಟದಲ್ಲಿ ಸರ್ಕಾರಕ್ಕೆ ಏನು ಮಾಡಲು ಸಾಧ್ಯವಾಗುತ್ತಿಲ್ಲ ಎಂದಾದರೆ ನ್ಯಾಯಾಲಯವು ಮಧ್ಯ ಪ್ರವೇಶ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿರುವುದು ಪ್ರಕರಣದ ಗಂಭೀರತೆಯನ್ನು ಅರಿಯಬೇಕಾಗಿದೆ ಎಂದು ಹೇಳಿದರು.
ಮಣಿಪುರದಲ್ಲಿ 2023ರ ಮೇ 4 ರಂದು ಕುಕಿ ಜೋ ಬುಡಕಟ್ಟು ಸಮುದಾಯದ ಮಹಿಳೆಯರನ್ನು ಸಂಪೂರ್ಣ ಬೆತ್ತಲುಗೊಳಿಸಿ, ಸಾರ್ವಜನಿಕವಾಗಿ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ಮಾಡಿರುವ ದುಷ್ಕರ್ಮಿಗಳನ್ನು ಗಲ್ಲು ಶಿಕ್ಷೆಗೆ ಗುರುಪಡಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಸುಮಾರು ಮೂರು ತಿಂಗಳಿನಿಂದ ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿ ಹೋಗಿರುವ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಿಸುವಲ್ಲಿ ವಿಫಲರಾಗಿರುವ ಮುಖ್ಯಮಂತ್ರಿ ಬೀರೇನ್ ಸಿಂಗ್ ನೇತೃತ್ವದ ಸರ್ಕಾರವನ್ನು ತಕ್ಷಣವೇ ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕು.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಫಲವಾಗಿರುವ ಮುಖ್ಯಮಂತ್ರಿ ಬೀರೇನ್ ಸಿಂಗ್, ಕೇಂದ್ರ ಗೃಹಮಂತ್ರಿ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸಮಿತಿಯ ವಿಭಾಗೀಯ ಸಂಚಾಲಕ ಶಿವರಾಜ್ ಮರಳಿಗ, ಜಿಲ್ಲಾ ಸಂಚಾಲಕ ಶ್ರೀನಿವಾಸ್, ಶಂಕರ್ ನಿಡಘಟ್ಟ, ಅಪ್ಪಾಜಿ ಹೊಸಗಾವಿ, ಗುರುಲಿಂಗಯ್ಯ,ಪುಟ್ಟ ಲಿಂಗಯ್ಯ, ಡಿ.ತಿಮ್ಮೇಶ್ ಇತರರಿದ್ದರು.