ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗೈರು ಹಾಜರಾತಿಯನ್ನು ಹವ್ಯಾಸವನ್ನಾಗಿಸಿಕೊಂಡ ನೌಕರರ ವಿವರಗಳನ್ನು ನೀಡಬೇಕು ಎಂದು ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ತಿಳಿಸಿದ್ದಾರೆ ಎಂಬ ಲೆಟರೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆದರೆ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಯ ಸಹಿ ಇಲ್ಲ. ಹೀಗಾಗಿ ನೌಕರರು ಗೊಂದಲದಲ್ಲಿ ಇದ್ದಾರೆ. ಲೆಟರ್ನಲ್ಲಿ ಎಲ್ಲ ಜಿಲ್ಲಾ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಹುಬ್ಬಳ್ಳಿ ಪ್ರಾದೇಶಿಕ ಕಾರ್ಯಾಗಾರದ ಕಾರ್ಯ ವ್ಯವಸ್ಥಾಪಕರಿಗೆ ಎಂದು ಅಡ್ರಸ್ ಮಾಡಲಾಗಿದೆ.
ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ, ಮಿತವ್ಯಯ ಮತ್ತು ಸುರಕ್ಷಿತ ಸಾರಿಗೆ ಸೌಕರ್ಯವನ್ನು ಕಲ್ಪಿಸುವ ಧೈಯೋದ್ದೇಶಗಳನ್ನು ಹೊಂದಿದೆ. ಸಂಸ್ಥೆಯಲ್ಲಿ ಕಾರ್ಯನಿರತರು ಬಹುತೇಕರು ಚಾಲಕ, ನಿರ್ವಾಹಕ ಮತ್ತು ತಾಂತ್ರಿಕ ಸಿಬ್ಬಂದಿಗಳಾಗಿದ್ದಾರೆ. ಇವರು ಸಾರ್ವಜನಿಕ ಪ್ರಯಾಣಿಕರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಸಿಬ್ಬಂದಿಗಳಾಗಿದ್ದಾರೆ.
ಅಲ್ಲದೇ ಸಂಸ್ಥೆಯ ಸೇವೆಯನ್ನು ಪರಿಗಣಿಸಿದ ಸರ್ಕಾರವು ಸಂಸ್ಥೆಯನ್ನು ಅತ್ಯಾವಶ್ಯಕ ಸೇವಾ ಸಂಸ್ಥೆ ಎಂದು ಪರಿಗಣಿಸಿ ಅಧಿಸೂಚನೆ ಹೊರಡಿಸಿದೆ. ಜತೆಗೆ ಸಂಸ್ಥೆಯ ಸೇವೆಯನ್ನು ಪರಿಗಣಿಸಿದ ಸರ್ಕಾರ ಶಕ್ತಿಯೋಜನೆಯಂತಹ ಗುರುತರ ಜವಾಬ್ದಾರಿಯನ್ನು ನಮ್ಮ ಮೇಲೆ ಹೊರಿಸಿದೆ.
ಈ ಹಂತದಲ್ಲಿ ಸಾರ್ವಜನಿಕರಿಗೆ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿ ಸಂಸ್ಥೆಯ ಮೇಲೆ ಸರ್ಕಾರವು ಹೊರಿಸಿದ ಜವಾಬ್ದಾರಿಗೆ ಸ್ಪಂದಿಸಬೇಕಿರುವುದು ಎಲ್ಲರ ಹೊಣೆಯಾಗಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳು ಗೈರುಹಾಜರಾಗಿ ತಮ್ಮ ದೈನಂದಿನ ಕರ್ತವ್ಯದಿಂದ ದೂರ ಉಳಿದಲ್ಲಿ ಸರ್ಕಾರ ವಹಿಸಿರುವ ಗುರುತರ ಜವಾಬ್ದಾರಿಯನ್ನು ಸಾಧಿಸುವಲ್ಲಿ ವಿಫಲರಾಗುವ ಸಾಧ್ಯತೆ ಇದೆ.
ಕೆಲವು ನೌಕರರು ದೀರ್ಘಕಾಲದಿಂದ ಗೈರುಹಾಜರಿಯಲ್ಲಿ ಉಳಿದು ಸಂಸ್ಥೆಯ ಅರ್ಥಿಕ ನಷ್ಟಕ್ಕೆ ಕಾರಣರಾಗುತ್ತಿರುವರು. ಈ ಹಿನ್ನೆಲೆಯಲ್ಲಿ ಈ ಕೆಳಕಂಡ ಅಂಶಗಳನ್ನು ಒಳಗೊಂಡ ನೌಕರರನ್ನು ಗುರುತಿಸಿ ಅವರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಲು ಕಾರ್ಯ ಯೋಜನೆ ರೂಪಿಸಿಲಾಗುತ್ತಿದೆ.
ಅಲ್ಲದೆ ಕೆಲವು ನೌಕರರು ಬೇರೆ ಬೇರೆ ಕಾರಣಗಳಿಗಾಗಿ ಮತ್ತು ಅನಾರೋಗ್ಯದ ನಿಮಿತ್ತ, ‘ಮದ್ಯವ್ಯಸನದಿಂದ ಬಳಲುತ್ತಿದ್ದು ಸಂಸ್ಥೆಯ ಸೇವೆಗೆ ಲಭ್ಯವಾಗದೇ ಇರಬಹುದು. ಅಂತಹ ನೌಕರರ ವಿವರಗಳನ್ನು ಕ್ರೋಢೀಕರಿಸಿ ಈ ಕಚೇರಿಗೆ ನೀಡಿದಲ್ಲಿ ಅವರನ್ನು ಸಮಾಲೋಚನೆ ಮತ್ತು ಮದ್ಯವ್ಯಸನಿ ವಿಮುಕ್ತಿ ಚಿಕಿತ್ಸಾ ಕೇಂದ್ರಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಅವರನ್ನು ಪುನಃ ಮುಂಬರುವ ದಿನಗಳಲ್ಲಿ ಹೆಚ್ಚು ಉತ್ಸುಕತೆಯಿಂದ ಕಾರ್ಯ ನಿರ್ವಹಿಸುವಂತೆ ಪ್ರೇರೇಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಆದುದರಿಂದ ಗೈರುಹಾಜರಾತಿಯನ್ನು ಹವ್ಯಾಸವನ್ನಾಗಿಸಿಕೊಂಡ ನೌಕರರ ಪಟ್ಟಿ, ದೀರ್ಘ ಕಾಲದಿಂದ ಗೈರಾಗಿರುವವರು, ಅನಾರೋಗ್ಯ ಮತ್ತು ಇತರೇ ಕಾರಣಗಳಿಂದ ಬಳಲುತ್ತಿರುವವರು, ಮದ್ಯವ್ಯಸನಿಗಳಾಗಿದ್ದು ಅಸಮರ್ಪಕ ಕಾರ್ಯ ನಿರ್ವಹಣೆಯನ್ನು ಹೊಂದಿರುವ ನೌಕರರ ಪಟ್ಟಿ ಹೀಗೆ ಮೇಲಿನ ಅಂಶಗಳನ್ನು ಒಳಗೊಂಡ ತಮ್ಮ ವಿಭಾಗದ ನೌಕರರ ಪಟ್ಟಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಿ ಇದೇ ಆ.26ರರೊಳಗಾಗಿ ಯಾವುದೇ ನೆನಪುಗಳಿಗೆ ಆಸ್ಪದ ನೀಡದಂತೆ ಈ ಕಚೇರಿಗೆ ಕಳುಹಿಸಲು ಕೋರಲಾಗಿದೆ ಎಂದು ತಿಳಿಸಲಾಗಿದೆ.