ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ನೂರು ದಿನಗಳಾದರೂ ಒಬ್ಬ ವಿಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗದ ಬಿಜೆಪಿ ಕರ್ನಾಟಕದಲ್ಲಿ ದಿವಾಳಿಯಾಗಿದೆ. ಕರ್ನಾಟಕದ ಇತಿಹಾಸದಲ್ಲಿ ವಿಪಕ್ಷಕ್ಕೆ ಇಂಥ ಪರಿಸ್ಥಿತಿ ಎದುರಾಗಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಆ.28ರ ಸೋಮವಾರ ಆಯೋಜಿಸಿದ್ದ ಮೈಸೂರು ಜಿಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳ ಸಭೆಗೆ ಆಗಮಿಸಿದ ಸಿದ್ದರಾಮಯ್ಯ ನಗರ ಸರ್ಕಾರಿ ಭವನದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಹೇಳುವ ಮೂಲಕ ಬಿಜೆಪಿಯಿಂದ ಕೆಲ ನಾಯಕರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಆಪರೇಷನ್ ಹಸ್ತಕ್ಕೆ ಗ್ರೀನ್ ಸಿಗ್ನಲ್ ನೀಡಿದರು.
ಸ್ವಾಗತಕ್ಕೆ ಬೇಡ ಎಂದು ಮೋದಿಯೇ ಹೇಳಿದ್ದರು: ಇಸ್ರೋಗೆ ಭೇಟಿ ನೀಡಲು ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯದ ಮುಖ್ಯಮಂತ್ರಿ ಸ್ವಾಗತ ಮಾಡಲು ಆಗಮಿಸುವುದು ಬೇಡ ಎಂದು ಸೂಚಿಸಿದ್ದರು. ಆದ್ದರಿಂದ ನಾವು ಸ್ವಾಗತಕ್ಕೆ ತೆರಳಲಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬುಧವಾರ ನಾಲ್ಕನೇ ಗ್ಯಾರಂಟಿಗೆ ಚಾಲನೆ: ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಯೋಜನೆ ಆಗಸ್ಟ್ 30ರಂದು ಅನುಷ್ಠಾನಗೊಳ್ಳಲಿದೆ. ರಾಜ್ಯದಾದ್ಯಂತ 1.30 ಕೋಟಿ ಕುಟುಂಬದ ಯಜಮಾನಿಯರು ಇದರ ಫಲಾನುಭವಿಗಳಾಗಿದ್ದು, ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡಂತೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಆಗಸ್ಟ್ 30ರ ಕಾರ್ಯಕ್ರಮವನ್ನು ಬೆಳಗಾವಿಯಿಂದ ಮೈಸೂರಿಗೆ ಸ್ಥಳಾಂತರ ಮಾಡಿರುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ ಸಿದ್ದರಾಮಯ್ಯ ಅವರು, ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಮಹಿಳೆಯರು ಈ ಹಣವನ್ನು ವಿವಿಧ ಉದ್ದೇಶಗಳಿಗೆ ಬಳಕೆ ಮಾಡುವುದರಿಂದ ಸರ್ಕಾರಕ್ಕೂ ಆದಾಯ ಬರಲಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ ಎಂದರು.
ಮುಖ್ಯಮಂತ್ರಿಯಾದ ಬಳಿಕ ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಇಂದು ನಡೆಯುತ್ತಿರುವ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದು, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಸಿಎಂ ಅವರನ್ನು ಸ್ವಾಗತಿಸಿದರು.
ಸಂಸದ ಪ್ರತಾಪ್ ಸಿಂಹ, ಶಾಸಕರಾದ ತನ್ವೀರ್ ಸೇಠ್, ಟಿ.ಎಸ್.ಶ್ರೀವತ್ಸ, ಹರೀಶ್‌ಗೌಡ, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ, ಕೆ.ಹರೀಶ್‌ಗೌಡ, ಡಿ.ರವಿಶಂಕರ್, ಸಿ.ಎನ್.ಮಂಜೇಗೌಡ, ಡಾ.ಡಿ.ತಿಮ್ಮಯ್ಯ, ಎಚ್.ವಿಶ್ವನಾಥ್, ಮರಿತಿಬ್ಬೇಗೌಡ, ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಸಭೆಯಲ್ಲಿ ಇದ್ದಾರೆ.