ರಾಮನಗರ: ಕಾಲೇಜಿನ ಆವರಣದಲ್ಲೇ ದುಷ್ಕರ್ಮಿಯೊಬ್ಬ ಪಿಯುಸಿ ವಿದ್ಯಾರ್ಥಿನಿಯೊಬ್ಬರಿಗೆ ಚೂರಿಯಿಂದ ಇರಿದು ಬಳಿಕ ಆಕೆಯನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ ಸಿನಿಮೀಯ ಘಟನೆ ನಗರದಲ್ಲಿ ಸೋಮವಾರ ನಡೆದಿದೆ.
ರಾಮನಗರದ ಮಹಿಳಾ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸಂಜನಾ ಮೇಲೆ ಈ ದಾಳಿ ನಡೆದಿದೆ. ದುಷ್ಕರ್ಮಿಯ ಹಲ್ಲೆಯಿಂದ ಆಕೆಯ ಸ್ಥಿತಿ ಗಂಭೀರವಾಗಿದ್ದು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ ಸಂಜನಾ.
ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳಲ್ಲಿ ಒಬ್ಬಾತ ಕಾರಿನಿಂದ ಕೆಳಗಿಳಿದು ಸಂಜನಾಗೆ ಚೂರಿಯಿಂದ ಇರಿದುದಲ್ಲದೆ ಬಳಿಕ ಆಕೆಯನ್ನು ಅದೇ ಕಾರಿನಲ್ಲಿ ಎತ್ತಾಕಿಕೊಂಡು ಪರಾರಿಯಾಗಿದ್ದಾನೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಅಲ್ಲಿಂದ ಪರಾರಿಯಾಗುವ ಪ್ರಯತ್ನದಲ್ಲಿದ್ದ ವೇಳೆ ಪೊಲೀಸರು ಕೋಳಹಾಕಿದ್ದಾರೆ.
ಚೂರಿಯಿಂದ ಇರಿದವನು ಡಿ.ಎನ್ ಚೇತನ್ ಎಂದು ಗುರುತಿಸಲಾಗಿದ್ದು, ಇವನೊಬ್ಬ ಪಾಗಲ್ ಪ್ರೇಮಿ ಎಂದು ತಿಳಿದು ಬಂದಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದಾಳಿಂಬ ಗ್ರಾಮದದ ಆರೋಪಿ ಚೇತನ್ ಅದೇ ಗ್ರಾಮದ ಕುಮಾರ್ ಹಾಗೂಕನ್ಯಾ ಅವರ ಪುತ್ರಿ, ಪಿಯುಸಿ ವಿದ್ಯಾರ್ಥಿನಿ ಸಂಜನಾ ಅವರನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿ ಆಕೆಯನ್ನು ಪೀಡಿಸುತ್ತಿದ್ದ. ಆದರೆ, ಆಕೆ ಆತನ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಕುಪಿತಗೊಂಡ ಆರೋಪಿ ಎಂದಿನಂತೆ ಸಂಜನಾ ಇಂದು ಬೆಳಗ್ಗೆ 9.15ರ ಸುಮಾರಿಗೆ ಸಹಪಾಠಿಗಳ ಜತೆ ಕಾಲೇಜಿಗೆ ಬರುತ್ತಿದ್ದಂತೆ ಈ ಕೃತ್ಯ ಎಸಗಿದ್ದಾನೆ.
ಸಂಜನಾ ಕಾಲೇಜಿನ ಆವರಣಕ್ಕೆ ಬರುತ್ತಿದ್ದಂತೆ ಇನ್ನೋವಾ ಕಾರಿನಲ್ಲಿ ಬಂದ ತಂಡದಲ್ಲಿದ್ದ ಆರೋಪಿ ಚೇತನ್ ಕಾರಿನಿಂದ ಇಳಿದು ಸಂಜನಾಗೆ ಚಾಕುವಿನಿಂದ ಏಕಾಏಕಿ ಇರಿದ್ದಿದ್ದಾನೆ. ಸಂಜನಾ ಚೂರಿ ಇರಿತದಿಂದ ಕೆಳಗೆ ಬೀಳುತ್ತಿದ್ದಂತೆಯೇ ಆತನೇ ಆಕೆಯನ್ನು ನೇರವಾಗಿ ಕಾರಿಗೆ ಎತ್ತಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.
ಈ ವೇಳೆ ಸ್ಥಳದಲ್ಲಿದ್ದ ಕೆಲವರು ಕಾರಿನತ್ತ ಕಲ್ಲು ತೂರಿದ್ದಾರೆ. ಆದರೂ ಕಾರು ನಿಲ್ಲಿಸದೆ ಪರಾರಿಯಾಗಿದ್ದು, ಇತ್ತ ಚೂರಿ ಇರಿತ ಮತ್ತು ಅಪಹರಣದ ಘಟನೆಯಿಂದ ಕಾಲೇಜು ಆವರಣ ಬೆಚ್ಚಿ ಬಿದ್ದಿದ್ದು, ಕೂಡಲೇ ಕಾಲೇಜಿನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಗೆ ಸೇರಿಸಿದ ಚೇತನ್ & ಟೀಮ್: ಸಂಜನಾಳ ಭುಜ ಮತ್ತು ಕತ್ತಿನ ಭಾಗಕ್ಕೆ ಚೂರಿಯಿಂದ ಇರಿದಿದ್ದರಿಂದ ತೀವ್ರರಕ್ತ ಸ್ರಾವವಾಗಿದ್ದರಿಂದ ಆಕೆಯನ್ನು ರಾಮನಗರದ ಖಾಸಗಿ ಆಸ್ಪತ್ರೆಗೆ ಚೇತನ್ ಮತ್ತು ಟೀಂ ದಾಖಲಿಸಿದೆ. ಚೇತನ್ ಕಾರು ಚಾಲಕನಾಗಿದ್ದು ಸಂಜನಾಳ ಹಿಂದೆ ಬಿದ್ದು, ಪ್ರೀತಿಸುತ್ತಿರುವುದಾಗಿ ಹೇಳುತ್ತಿದ್ದ ಎನ್ನಲಾಗಿದೆ. ಆದರೆ ಆ ಪ್ರೀತಿಯನ್ನು ಈಕೆ ಒಪ್ಪಿದ ಕಾರಣ ಈ ರೀತಿಯ ಕೃತ್ಯಕ್ಕೆ ಮುಂದಾಗಿದ್ದಾನೆ.
ಯುವತಿಯ ಸ್ಥಿತಿ ಇನ್ನೂ ಗಂಭೀರ: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಯುವತಿಯ ಆರೋಗ್ಯ ವಿಚಾರಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ರಾಮನಗರದ ಐಜೂರು ಠಾಣೆ ಪೊಲೀಸರು ಆರೋಪಿ ಚೇತನ್ ನನ್ನು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯನ್ನು ಖುದ್ದು ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಅವರೂ ವಿಚಾರಣೆ ಮಾಡುತ್ತಿದ್ದಾರೆ ಎಂದು ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.