ಮೈಸೂರು: ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟು ತ್ಯಾಗ ರಾಜಕಾರಣ ಮೆರೆದ ಪುತ್ರನಿಗೆ ಎರಡೆರಡು ಸಾಂವಿಧಾನಿಕ ಹುದ್ದೆಗಳನ್ನು ಅಂದರೆ ಆಶ್ರಯ ಸಮಿತಿ ಅಧ್ಯಕ್ಷ ಮತ್ತು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಮಿತಿ ಸದಸ್ಯರನ್ನಾಗಿ ಮಾಡಿ ಮುಖ್ಯಮಂತ್ರಿ ತಮ್ಮ ಋಣಭಾರ ಕಡಿಮೆ ಮಾಡಿಕೊಂಡಿದ್ದಾರೆ.
ವರುಣಾ ಕ್ಷೇತ್ರದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರಿಗೆ ರಾಜಕೀಯ ʻಆಶ್ರಯʼ ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ. ಈ ಮೂಲಕ ಯಾವುದೇ ಹುದ್ದೆ ಇಲ್ಲದೆ ಜವಾಬ್ದಾರಿ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಹೇಳುತ್ತಿದ್ದ ಯತೀಂದ್ರ ಅವರಿಗೆ ಎರಡೆರಡು ಸಾಂವಿಧಾನಿಕ ಹುದ್ದೆಗಳನ್ನು ದಯಪಾಲಿಸಿದ್ದಾರೆ ಸಿಎಂ.
ಚುನಾವಣೆ ಬಳಿಕ ಸಿದ್ದರಾಮಯ್ಯ ಅವರು ಸಿಎಂ ಆಗಿ ಹೆಚ್ಚು ಕಡಿಮೆ ಬೆಂಗಳೂರಿಗೆ ಸೀಮಿತವಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಕ್ಷೇತ್ರವನ್ನು ನೋಡಿಕೊಳ್ಳುತ್ತಿರುವ ಯತೀಂದ್ರ ಅವರು ಯಾವುದೇ ಹುದ್ದೆ ಇಲ್ಲದಿದ್ದರೆ ಕೆಲಸ ಮಾಡುವುದು ಕಷ್ಟವಾಗುತ್ತದೆ, ಸಣ್ಣದಾದರೂ ಸರಿ ಒಂದು ಜವಾಬ್ದಾರಿ ಬೇಕು ಎಂದು ನೇರವಾಗಿ ಕೇಳಿದ್ದರು.
ಅಧಿಕಾರ ಇಲ್ಲದೆ ಇದ್ದರೆ ಅಧಿಕಾರಿಗಳು ಕೂಡಾ ಮಾತು ಕೇಳುವುದಿಲ್ಲ ಎಂದು ಅವರು ತಮ್ಮ ಮಾತಿಗೆ ವಿವರಣೆಯನ್ನೂ ಕೂಡ ಕೊಟ್ಟಿದ್ದರು. ಜತೆಗೆ ವಿಪಕ್ಷಗಳು ಕೂಡಾ ಯತೀಂದ್ರ ಅವರಿಗೆ ಯಾವುದೇ ಸಾಂವಿಧಾನಿಕ ಹುದ್ದೆ ಇಲ್ಲದಿದ್ದರೂ ಅವರು ಸರ್ಕಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದವು.
ಇದೀಗ ಸಿದ್ದರಾಮಯ್ಯ ಅವರು ತಮ್ಮ ಪುತ್ರನಿಗೆ ಎರಡೆರಡು ಹುದ್ದೆಗಳನ್ನು ನೀಡಿದ್ದು, ಈಗ ಯತೀಂದ್ರ ಅವರು ಹಲವು ಮಹತ್ವದ ಸಭೆಗಳಲ್ಲಿ ಅಧಿಕಾರಯುತವಾಗಿ ಪಾಲ್ಗೊಳ್ಳಬಹುದಾಗಿದೆ. ಅಲ್ಲದೆ ಈ ಹುದ್ದೆಗಳ ಬಲದಿಂದ ಅವರು ಕ್ಷೇತ್ರದ ಸರ್ಕಾರಿ ಸಭೆಗಳಲ್ಲಿ ಭಾಗವಹಿಸಲು ಅವಕಾಶ ದೊರೆಯಲಿದೆ. ತಾಲೂಕು ಮತ್ತು ಜಿಲ್ಲಾಪಂಚಾಯಿತಿ ಸಭೆಗಳಲ್ಲಿ ಭಾಗವಹಿಸಬಹುದು. ಈ ಮೂಲಕ ವರುಣ ಕ್ಷೇತ್ರದ ಜನರ ಸಮಸ್ಯೆಗಳನ್ನೂ ನೇರವಾಗಿ ಬಗೆಹರಿಸಲು ಅವಕಾಶ ಸಿಕ್ಕಂತಾಗಿದೆ.
ಈ ಹಿಂದೆ ಯಾವುದೇ ಅಧಿಕಾರವಿಲ್ಲದ ಹಿನ್ನೆಲೆಯಲ್ಲಿ ಯತೀಂದ್ರ ಅವರು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಅವರು ಎಲ್ಲಿಗೇ ಹೋದರು ಜನರು ಅವರಿಗೆ ಮುತ್ತಿಗೆ ಹಾಕುತ್ತಿದ್ದರು. ದೂರು, ಮನವಿಗಳನ್ನು ಸಲ್ಲಿಸುತ್ತಿದ್ದರು. ಆದರೆ, ಅಧಿಕಾರವಿಲ್ಲದೆ ಅಸಹಾಯಕರಾಗಿದ್ದರು. ಇದೀಗ ಸರ್ಕಾರ ನೂರು ದಿನ ಪೂರೈಸಿದ ಬೆನ್ನಲ್ಲೆ ಸಿಎಂ ಅವರು ಪುತ್ರನಿಗೆ ಭರ್ಜರಿ ಡಬಲ್ ಗಿಫ್ಟ್ ನೀಡಿ ಸಮಸ್ಯೆ ಬಗೆಹರಿಸಿದ್ದಾರೆ.
ಮೊದಲ ದಿನವೇ ಭಾರಿ ಡಿಮ್ಯಾಂಡ್: ಕೆಡಿಪಿ ಸದಸ್ಯರಾಗಿ ನೇಮಕಗೊಂಡಿರುವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸೋಮವಾರ ಮೈಸೂರಿನಲ್ಲಿ ನಡೆದ ಕೆಡಿಪಿ ಸಭೆಗೆ ಆಗಮಿಸಿದಾಗ ಅವರಿಗೆ ಫುಲ್ ಡಿಮ್ಯಾಂಡ್ ಸೃಷ್ಟಿಯಾಯಿತು. ಡಾ.ಯತೀಂದ್ರ ಮೊದಲ ಸಾಲಿನಲ್ಲೇ ಕುಳಿತಿದ್ದರು ಮತ್ತು ಹಲವಾರು ಅಧಿಕಾರಿಗಳು ಅವರನ್ನೇ ಹುಡುಕಿಕೊಂಡು ಹೋಗಿ ಮಾತನಾಡುತ್ತಿದ್ದರು. ನಾಗರಿಕರು ಕೂಡಾ ಯತೀಂದ್ರ ಅವರಿಗೆ ಮನವಿ ಪತ್ರಗಳನ್ನು ನೀಡಲು ಸಾಲುಸಾಲಾಗಿ ಬರುತ್ತಿದ್ದದ್ದುಕೂಡ ಕಂಡುಂಬಂತು.