ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಹರಡುವುದನ್ನು ತಡೆಯಲು ಈಗಾಗಲೇ ನಾಗರಿಕರ ಸಂಚಾರ ನಿರ್ಬಂಧಿಸಿ ಸಿ.ಅರ್.ಪಿ.ಸಿ ಸೆಕ್ಷನ್ 144 (3 ) ರಲ್ಲಿ ಆದೇಶ ಹೊರಡಿಸಿದೆ. ಅಲ್ಲದೇ ಇತರೇ ನಿರ್ದೇಶನಗಳನ್ನು ಹೊರಡಿಸಲಾಗಿದೆ.
ಆದರೆ ಜಿಲ್ಲೆಯ ನಾಗರಿಕರು ಈ ಆದೇಶಗಳನ್ನು ಉಲ್ಲಂಘನೆ ಮಾಡುತ್ತಿರುವುದು ವರದಿಯಾಗುತ್ತಿದ್ದು, ಇಂತಹ ಪ್ರಕರಣಗಳನ್ನು ನಿಯಂತ್ರಿಸುವ ಅವಶ್ಯಕತೆಯಿರುವುದರಿಂದ, ಕಾನೂನು ಕ್ರಮ ಕೈಗೊಳ್ಳುವ ಅವಶ್ಯಕತೆಯಿದ್ದು, ಸಿ.ಆರ್.ಪಿ.ಸಿ ಆದೇಶ ಮತ್ತು ಕೋವಿಡ್ ರೋಗವನ್ನು ನಿಯಂತ್ರಿಸಲು ಹೊರಡಿಸಲಾಗಿರುವ ಇತರೇ ನಿರ್ದೇಶನಗಳನ್ನು ಪಾಲಿಸದೇ ಇದ್ದವರ ಮೇಲೆ, ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಅಧಿಕಾರವನ್ನು , ಕುಂದಾಪುರ ಉಪವಿಭಾಗಾಧಿಕಾರಿಗಳು, ಉಡುಪಿ, ಕಾಪು, ಬ್ರಹ್ಮಾವರ, ಕುಂದಾಪುರ , ಕಾರ್ಕಳ, ಬೈಂದೂರು, ಹೆಬ್ರಿ ತಹಸೀಲ್ದಾರ್ ಗಳಿಗೆ ಪ್ರತ್ಯಾಯೋಜಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.
ಕಾರ್ಮಿಕರಿಗೆ ಮಾಸ್ಕ್ ವಿತರಣೆ
ಇಲಾಖೆ ಉಡುಪಿ, ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಉಡುಪಿ ಘಟಕದ ವತಿಯಿಂದ , ಅಸಂಘಟಿತ ವಲಯದ ಕಟ್ಟಡ ಕಾರ್ಮಿಕರಿಗೆ , ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಮತ್ತು ಸೋಪುಗಳನ್ನು ವಿತರಿಸಲಾಯಿತು.
ಪ್ರಥಮ ಹಂತದಲ್ಲಿ ಉಡುಪಿಯ ಬೀಡಿನಗುಡ್ಡೆಯ ಲೇಬರ್ ಕಾಲೋನಿ ಹಾಗೂ ಸುತ್ತಮುತ್ತಲಿದ್ದ 500 ಮಂದಿ ಕಾರ್ಮಿಕರಿಗೆ ಪ್ರತಿ ಮನೆಗೆ 1 ಮಾಸ್ಕ್ ಮತ್ತು 2 ಸೋಪುಗಳನ್ನು ಹಾಗೂ ಕೊರೊನಾ ನಿಯಂತ್ರಣ ಕುರಿತ ಮುನ್ನೆಚ್ಚರಿಕಾ ಕ್ರಮಗಳ ಕುರಿತ ಕರಪತ್ರಗಳನ್ನು ವಿತರಿಸಲಾಗಿದ್ದು, ಜಿಲ್ಲೆಯಲ್ಲಿನ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಮಾಸ್ಕ್ ಮತ್ತು ಸೋಪುಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
ರೆಡ್ಕ್ರಾಸ್ ಉಡುಪಿ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಡಾ. ಕೀರ್ತಿ ಪಾಲನ್, ಕಾರ್ಮಿಕ ನಿರೀಕ್ಷಕರಾದ ಪ್ರವೀಣ್ ಕುಮಾರ್, ಜೀವನ್ ಕುಮಾರ್ ಹಾಗೂ ಉಡುಪಿ ಜಿಲ್ಲೆಯ ಕರೋನಾ ಸೈನಿಕರು ಹಾಗೂ ರೆಡ್ಕ್ರಾಸ್ ಸಿಬ್ಬಂದಿ ಭಾಗವಹಿಸಿದ್ದರು.