ನ್ಯೂಡೆಲ್ಲಿ: ಕೇಂದ್ರ ಸರ್ಕಾರ ಕೊನೆಗೂ ದೇಶದ ಜನರಿಗೆ ಆಗುತ್ತಿರುವ ಹೊರೆಯನ್ನು ಕೊಂಚ ಇಳಿಸೋ ಪ್ರಯತ್ನಕ್ಕೆ ಕೈ ಹಾಕಿದ್ದು, ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿದ್ದ ಸಾಮಾನ್ಯ ಜನರಿಗೆ ಇವತ್ತು ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದೆ. ದೇಶದ ಎಲ್ಲ ಫಲಾನುಭವಿಗಳಿಗೂ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 200 ರೂಪಾಯಿ ಇಳಿಕೆ ಮಾಡಲಾಗುತ್ತಿದೆ ಎಂದು ಕ್ಯಾಬಿನೆಟ್ ಸಭೆ ಬಳಿಕ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ.
ಓಣಂ, ರಕ್ಷಾ ಬಂಧನ್ ಹಬ್ಬದ ಸಂಭ್ರಮದಲ್ಲಿ ಈ ಕೊಡುಗೆಯನ್ನು ದೇಶದ ಜನತೆಗೆ ಸರ್ಕಾರ ನೀಡಿದ್ದು, ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯ ಕುರಿತು ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 200 ರೂಪಾಯಿ ದರ ಇಳಿಕೆಯ ಎಫೆಕ್ಟ್ ದೇಶದ ಎಲ್ಲ ಫಲಾನುಭವಿಗಳಿಗೂ ಅನ್ವಯವಾಗಲಿದೆ. ಅಂದ್ರೆ ಇದುವರೆಗೂ 1,100 ರೂಪಾಯಿ ಕೊಟ್ಟು ಸಿಲಿಂಡರ್ ಖರೀದಿಸುತ್ತಿರುವ ಗ್ರಾಹಕರು ಇನ್ಮುಂದೆ 900 ರೂಪಾಯಿ ಆಗಲಿದೆ ಎಂದು ತಿಳಿಸಿದ್ದಾರೆ.
ಸಾಮಾನ್ಯ ಗ್ರಾಹಕರಿಗೆ 200 ರೂ. ಸಬ್ಸಿಡಿ: ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇದುವರೆಗೂ 200 ರೂಪಾಯಿ ಸಬ್ಸಿಡಿ ನೀಡಲಾಗುತ್ತಿತ್ತು. ಇನ್ಮುಂದೆ 200 ರೂಪಾಯಿ ಜೊತೆ ಮತ್ತೆ 200 ರೂಪಾಯಿ ಸೇರಿಸಿ 400 ರೂಪಾಯಿ ಸಬ್ಸಿಡಿ ನೀಡಲಾಗುತ್ತೆ. ಇನ್ಮುಂದೆ ಉಜ್ವಲ ಯೋಜನೆಯ ಫಲಾನುಭವಿಗಳು ಒಂದು ಗ್ಯಾಸ್ ಸಿಲಿಂಡರ್‌ಗೆ 750 ರೂಪಾಯಿ ಮಾತ್ರ ಪಾವತಿಸಬೇಕು.
ಇನ್ನು ಉಜ್ವಲ ಯೋಜನೆ ಹೊರತುಪಡಿಸಿ ಉಳಿದ ಗ್ರಾಹಕರಿಗೆ 200 ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ. ಬೆಂಗಳೂರಲ್ಲಿ 1105 ರೂಪಾಯಿಗೆ ಖರೀದಿಸುವ ಸಾಮಾನ್ಯ ಗ್ರಾಹಕರು ಇನ್ಮುಂದೆ 905 ರೂಪಾಯಿಗೆ ಒಂದು ಗ್ಯಾಸ್ ಸಿಲಿಂಡರ್ ಕೊಂಡುಕೊಳ್ಳಬಹುದು.
ಗ್ಯಾಸ್ ಸಿಲಿಂಡರ್‌ನ 200 ರೂಪಾಯಿ ಸಬ್ಸಿಡಿಯಿಂದ ಕೇಂದ್ರ ಸರ್ಕಾರಕ್ಕೆ 7,500 ಕೋಟಿ ರೂ. ಸೇರುವ ಬದಲಿಗೆ ಅದು ಗ್ರಾಹಕರಲ್ಲೇ ಉಳಿಯಲಿದೆ. ಆದರೆ, ಪ್ರಧಾನಿ ಮೋದಿ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿದ್ದು, ಚುನಾವಣಾ ಸೋಲಿನಿಂದ ಕಂಗೆಟ್ಟು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.