ಮೈಸೂರು: ರಾಜ್ಯದ 1.28 ಕೋಟಿ ಮನೆ ಯಜಮಾನಿಯರಿಗೆ ಪ್ರತಿ ತಿಂಗಳು 2000 ರೂ. ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆ ಸಾಕಾರಗೊಂಡಿದೆ. ಇದರೊಂದಿಗೆ ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ನೀಡಿದ ಪಂಚ ಗ್ಯಾರಂಟಿಗಳಲ್ಲಿ ನಾಲ್ಕನೆಯದನ್ನು ಈಡೇರಿಸಿದಂತಾಗಿದೆ. ಈಗಾಗಲೇ ಶಕ್ತಿ, ಅನ್ನ ಭಾಗ್ಯ ಮತ್ತು ಗೃಹ ಜ್ಯೋತಿ ಯೋಜನೆಗಳು ಜಾರಿಯಾಗಿವೆ.
ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಸೇರಿದ ಒಂದು ಲಕ್ಷ ಮಹಿಳೆಯರನ್ನು ಸಾಕ್ಷೀಕರಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇನ್ನು ಈ ತಿಂಗಳಿಂದ ಪ್ರತಿ ತಿಂಗಳು ನಾಡಿನ ಗೃಹ ಲಕ್ಷ್ಮೀಯರಿಗೆ ಈ ಯೋಜನೆ ದೊರೆಯಲಿದೆ ಎಂದು ಹೇಳಿದರು.
ಇನ್ನು ಇದಕ್ಕೂ ಮುನ್ನ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾವು ಚುನಾವಣೆ ವೇಳೆ ಕೊಟ್ಟ ಭರವಸೆಯಂತೆ ನಾವು ಈಗಾಗಲೇ ಮೂರು ಯೋಜನೆಗಳನ್ನು ಜಾರಿಗೆ ತಂದಿದ್ದೆವು. ಈಗ ಮತ್ತೆ ನಾಲ್ಕನೇ ಯೋಜನೆಯಾಗಿ ಗೃಹಲಕ್ಷ್ಮೀ ಯೋಜನೆಯನ್ನು ಇಂದು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.
ಇದರ ಜತೆಗೆ ಬಾಕಿ ಇರುವ ಯುವನಿಧಿ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ. ಇದಕ್ಕೆ ನಿಮ್ಮ ಆಶೀರ್ವಾದವೇ ಕಾರಣ ಎಂದ ಹೇಳಿದರು.
ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಹಲವು ಸಚಿವರು, ಶಾಸಕರ ಸಮ್ಮುಖದಲ್ಲಿ ಲೋಗೊ ಅನಾವರಣದ ಮೂಲಕ ಈ ಯೋಜನೆಗೆ ಚಾಲನೆ ನೀಡಲಾಯಿತು. ಕಾಂಗ್ರೆಸ್‌ನ ರಾಜ್ಯ ಚುನಾವಣಾ ಉಸ್ತುವಾರಿಯಾಗಿದ್ದ ರಣದೀಪ್ ಸುರ್ಜೇವಾಲಾ ಅವರು ಕೂಡಾ ಉಪಸ್ಥಿತರಿದ್ದರು.
ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸ್ವಾಗತ ಭಾಷಣ ಮಾಡಿದರು. ಬಳಿಕ ದೀಪ ಹಚ್ಚಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಗೃಹಜ್ಯೋತಿ ಕಾರ್ಯಕ್ರಮ ಉದ್ಘಾಟನೆ: ರಾಜ್ಯದಲ್ಲಿ ಈ ತಿಂಗಳು 1.10 ಕೋಟಿ ಕುಟುಂಬಗಳು ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗುವ ಅರ್ಹತೆಯನ್ನು ಪಡೆದುಕೊಂಡಿದ್ದು, ಈಗಾಗಲೇ ಈ ಸೌಲಭ್ಯಕ್ಕಾಗಿ ನೋಂದಣಿಯನ್ನು ಮಾಡಿಕೊಂಡಿದ್ದಾರೆ. ಇನ್ನೂ 18.5 ಲಕ್ಷ ಮಹಿಳೆಯರು ನೋಂದಣಿ ಮಾಡಿಕೊಳ್ಳಲು ಬಾಕಿ ಇದೆ.
ಒಂದು ಲಕ್ಷ ಜನ ಫಲಾನುಭವಿಗಳು ಭಾಗಿ: ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳ ಒಂದು ಲಕ್ಷ ಫಲಾನುಭವಿಗಳು ಆಗಮಿಸಿದ್ದು ಇಡೀ ಸಭಾಂಗಣ ಮಹಿಳೆಯರಿಂದ ತುಂಬಿ ಹೋಗಿದೆ.
ರಾಜ್ಯಾದ್ಯಂತ 12,000 ಕಡೆ ಕಾರ್ಯಕ್ರಮ: ಕೇವಲ ಮೈಸೂರಿನಲ್ಲಿ ಮಾತ್ರವಲ್ಲ, ಇಡೀ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ ಮತ್ತು ಕೆಲವು ಗ್ರಾಮಗಳಲ್ಲೂ ಗೃಹಲಕ್ಷ್ಮಿ ಯೋಜನೆಯ ಉದ್ಘಾಟನೆಯ ಕಾರ್ಯಕ್ರಮ ನಡೆಯುತ್ತಿದೆ. ರಾಜ್ಯದ 12000 ಕಡೆ ಕಾರ್ಯಕ್ರಮ ನಡೆದಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳನ್ನು ಜೂಮ್ ಮೂಲಕ ಪ್ರಧಾನ ಕಾರ್ಯಕ್ರಮಕ್ಕೆ ಕನೆಕ್ಟ್ ಮಾಡಲಾಗಿದೆ. ಇಲ್ಲಿನ ಉದ್ಘಾಟನಾ ಕಾರ್ಯಕ್ರಮ ಅಲ್ಲಿ ನೇರ ಪ್ರಸಾರವಾಗುವ ವ್ಯವಸ್ಥೆ ಮಾಡಲಾಗಿದೆ. ಫಲಾನುಭವಿಗಳೊಂದಿಗೆ ರಾಹುಲ್ ಗಾಂಧಿ ಅವರು ಡಿಜಿಟಲ್ ಸಂವಾದ ನಡೆಸಲಿದ್ದು, ಇದು ಆನ್‌ಲೈನ್ ಮೂಲಕ ರಾಜ್ಯಾದ್ಯಂತ ನೇರಪ್ರಸಾರಗುತ್ತಿದೆ.