ಚಿತ್ರದುರ್ಗ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಮತ್ತು ಲಾರಿ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿದಂತೆ ಐವರು ಪ್ರಯಾಣಿಕರು ಮೃತಪಟ್ಟಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ.
ಹಿರಿಯೂರು ತಾಲೂಕು ಗೊಲ್ಲರಗಳ್ಳಿ ಗೇಟ್ ಎನ್‌ಎಚ್ 150ಎ ಹಿರಿಯೂರು ಬಳ್ಳಾರಿ ರಸ್ತೆಯಲ್ಲಿ ಸೋಮವಾರ ಬೆಳಗಿನ ಜಾವ 3.30ರ ಹೊತ್ತಿನಲ್ಲಿ ಈ ಭೀಕರ ಅಪಘಾತ ನಡೆದಿದೆ. ಮಸ್ಕಿಯ ರವಿ(23), ಮಾನ್ವಿಯ ನರಸಣ್ಣ(50), ಬೆಂಗಳೂರಿನ ಪಾರ್ವತಮ್ಮ(53) ಹಾಗೂ ಮಾಬಮ್ಮ(35) ಅಸುನೀಗಿದ್ದು, ಮತ್ತೊಬ್ಬರ ಗುರುತು ಪತ್ತೆಯಾಗಬೇಕಿದೆ.
ಮಸ್ಕಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಕೆಆರ್‌ಟಿಸಿ ಬಸ್ ಓವರ್‌ಟೇಕ್ ತೆಗೆದುಕೊಳ್ಳುವ ವೇಳೆ ಲಾರಿಗೆ ಹಿಂದಿನಿಂದ ಗುದ್ದಿ ಈ ದುರಂತ ಸಂಭವಿಸಿದೆ. ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದರೆ, ಚಳ್ಳಕೆರೆ ಆಸ್ಪತ್ರೆಯಲ್ಲಿ ಇಬ್ಬರು ಹಾಗೂ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಒಬ್ಬರು ಅಸುನೀಗಿದ್ದಾರೆ.
ಎಂಟು ಮಂದಿಗೆ ತೀವ್ರವಾಗಿ ಗಾಯಗೊಂಡಿದ್ದು, ಐವರನ್ನು ಜಿಲ್ಲಾಸ್ಪತ್ರೆಗೆ ಹಾಗೂ ಮೂವರನ್ನು ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಇನ್ನು ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬಸ್ ಚಾಲಕನ ಅತಿವೇಗದ ಚಾಲನೆಯೇ ದುರಂತಕ್ಕೆ ಕಾರಣವೆಂದು ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ತಿಳಿಸಿದ್ದಾರೆ. ಐಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇನ್ನು ಸಂಪೂರ್ಣ ನುಜ್ಜುಗುಜ್ಜಾಗಿರುವ ಬಸ್ ಅಪಘಾತದ ಭೀಕರತೆಯನ್ನು ಬಿಂಬಿಸುತ್ತಿದೆ. ಬಸ್ಸಿನಲ್ಲಿ 51 ಪ್ರಯಾಣಿಕರು ಇದ್ದರೆಂದು ಮೂಲಗಳು ತಿಳಿಸಿವೆ.