ಮಂಗಳೂರು: ಜಿಲ್ಲೆಗೆ ಹೊರಜಿಲ್ಲೆಗಳಿಂದ ಬರುವ ಆಹಾರ ಸಾಮಾಗ್ರಿಗಳು, ದಿನಸಿ , ತರಕಾರಿ, ಹಣ್ಣು ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ನಿಗಾ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯಲ್ಲಿ ಆಹಾರ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಸಂಬಂಧಿಸಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ತರಕಾರಿ, ಅಕ್ಕಿ, ಹಣ್ಣುಹಂಪಲು ಸೇರಿದಂತೆ ಆಹಾರ ಸಾಮಗ್ರಿಗಳ ಪೂರೈಕೆ ನಿರಂತರವಾಗಿರಬೇಕು. ಅಕ್ಕಿ, ತರಕಾರಿ, ಹಣ್ಣು ಹಂಪಲು ಸಾಗಿಸುವ ವಾಹನಗಳಿಗೆ ಯಾವುದೇ ಅಡೆತಡೆ ಮಾಡದಂತೆ ಅವರು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಗೆ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಇತರ ಜಿಲ್ಲೆಗಳಿಂದ ತರಕಾರಿ ಹಣ್ಣು ಹಂಪಲು ಸರಬರಾಜು ಆಗುತ್ತಿದ್ದು, ಅಕ್ಕಿ ಉಡುಪಿಯಿಂದ ರವಾನೆಯಾಗುತ್ತದೆ. ಇಂತಹ ವಾಹನಗಳ ಸಂಚಾರಕ್ಕೆ ಯಾವುದೇ ಕಾರಣಕ್ಕೂ ಅಡೆತಡೆ ಮಾಡದಂತೆ ನೋಡಿಕೊಳ್ಳಬೇಕು ಎಂದರು.
ಸಾರ್ವಜನಿಕರು ಆತಂಕಗೊಳ್ಳುವ ಅಗತ್ಯವಿಲ್ಲ. ಒಂದೇ ಬಾರಿಗೆ ಸಾಮಗ್ರಿಗಳನ್ನು ಖರೀದಿಸುವ ಅಗತ್ಯವಿಲ್ಲ. ಆಹಾರ ಸಾಮಗ್ರಿ ಸಾಕಷ್ಟು ದಾಸ್ತಾನು ಇರುವಂತೆ ಅಹಾರ ಇಲಾಖೆಗೆ ಸೂಚಿಸಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ವತಿಯಿಂದಲು ಸ್ಥಳೀಯ ತಂಡ ರಚಿಸಿ ನಿಗಾ ಇಡಲು ಸೂಚಿಸಲಾಗಿದೆ. ಜನರು ಅಂಗಡಿಗಳಲ್ಲಿ ಮುಗಿ ಬೀಳಬಾರದು. ಮಾರುಕಟ್ಟೆಯಲ್ಲಿ ಆಹಾರ ಸಾಮಾಗ್ರಿಗಳ ಸರಬರಾಜು ಕೊರತೆಯಾಗದಂತೆ ನಿಗಾ ಇಡಲಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ರೂಪಾ, ಮಹಾನಗರಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್, ಡಿಸಿಪಿಗಳಾದ ಅರುಣಾಂಶಗಿರಿ, ಲಕ್ಷ್ಮೀಗಣೇಶ್, ಎಎಸ್ಪಿ ವಿಕ್ರಂ ಅಮಾಟೆ, ಆಹಾರ ಇಲಾಖೆ ಜಂಟೀ ನಿರ್ದೇಶಕ ಮಂಜುನಾಥ್, ತಹಸೀಲ್ದಾರ್ ಗಳು ಉಪಸ್ಥಿತರಿದ್ದರು.
ವಿವಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ನಲ್ಲಿ ಪಾಠ
ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ನಿರ್ದೇಶದಂತೆ ಐಸಿಟಿ ಇನಿಶಿಯೇಟಿವ್ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಆನ್‍ಲೈನ್ ಮುಖಾಂತರ ವಿಷಯಗಳನ್ನು ಬೋಧನೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಶಿಕ್ಷಕರು ವಿದ್ಯಾರ್ಥಿಗಳಿಗೆ ಮನೆಯಿಂದಲೇ ಮಾರ್ಗದರ್ಶನ ನೀಡುವಂತೆ ತಿಳಿಸಲಾಗಿದೆ.
ವಿದ್ಯಾರ್ಥಿಗಳಿಗೆ ಮನೆಯಿಂದಲೇ ವಿಶ್ವವಿದ್ಯಾಲಯ/ ಕಾಲೇಜಿನ ವೆಬ್‍ಸೈಟ್ ಮುಖಾಂತರ ಒದಗಿಸುವಂತೆ ಹಾಗೂ ಜ್ಞಾನಾರ್ಜನೆಗೆ ಸಹಕರಿಸುವಂತೆ ತಿಳಿಸಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಸಹಕರಿಸುವಂತೆ ಮಂಗಳೂರು ವಿ.ವಿ ಕುಲಸಚಿವರು ತಿಳಿಸಿದ್ದಾರೆ.