NEWSನಮ್ಮಜಿಲ್ಲೆನಮ್ಮರಾಜ್ಯ

ತಾಲೂಕು ಮಟ್ಟದಲ್ಲಿ ವಾರಕ್ಕೊಮ್ಮೆ ಸಚಿವರು, ಶಾಸಕರ ಆಹ್ವಾನಿಸಿ ಜನ ಸಂಪರ್ಕ ಸಭೆ ನಡೆಸಿ: ಅಧಿಕಾರಿಗಳಿಗೆ ಸಿಎಂ ಖಡಕ್‌ ಸೂಚನೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಅಧಿಕಾರಿಗಳು ಮನೆಯಿಂದ ಕೆಲಸ ಮಾಡಬಾರದು. ಕಚೇರಿಯಲ್ಲೇ ಕುಳಿತು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಮಂಗಳವಾರ ಸೆ.12ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಅಧಿಕಾರಿಗಳು ಕೇಂದ್ರಸ್ಥಾನದಲ್ಲಿಯೇ ವಾಸವಿದ್ದು, ಜನರ ಸೇವೆಗೆ ಲಭ್ಯವಿರಬೇಕು. ಜತೆಗೆ ಡ್ಯೂಟಿಯ ಸಮಯದಲ್ಲಿ ಕಚೇರಿಯಲ್ಲಿರಬೇಕು, ಇಲ್ಲ ಪ್ರವಾಸದಲ್ಲಿರಬೇಕು. ಮನೆಯಲ್ಲಿ ಕುಳಿತು ಕೆಲಸ ಮಾಡಬಾರದು. Work from home ಗೆ ಅವಕಾಶವಿಲ್ಲ. ಇದರಿಂದ ಜನರಿಗೆ ತೊಂದರೆಯಾಗುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಹೇಳಿದರು.

ಹಾಗೆಯೇ ಅಧಿಕಾರಿಗಳು ದೂರವಾಣಿ ಕರೆಗೆ ಸಿಗುವುದಿಲ್ಲ ಎಂಬ ದೂರುಗಳೂ ಸಾರ್ವಜನಿಕರು, ಶಾಸಕರು ಮತ್ತು ಮಂತ್ರಿಗಳಿಂದ ಇವೆ. ಇದು ಒಳ್ಳೆಯದಲ್ಲ. ಮುಖ್ಯಮಂತ್ರಿ ಕಚೇರಿಯಿಂದ ಇರಲಿ, ಸಚಿವರಿರಲಿ, ಶಾಸಕರಿರಲಿ, ಜನಸಾಮಾನ್ಯರಿರಲಿ ಅವರ ಕರೆಗಳಿಗೆ ಸ್ಪಂದಿಸಬೇಕು. ಯಾವುದೇ ಪಕ್ಷದ ಶಾಸಕರಾಗಿರಲಿ ಪ್ರೋಟೋಕಾಲ್ ಚಾಚೂ ತಪ್ಪದೆ ಪಾಲಿಸಬೇಕು ಎನ್ನುವ ಸೂಚನೆ ನೀಡಿದರು.

ಅಧಿಕಾರಿಗಳಿಗೆ ಹೃದಯ ಸರಿಯಾಗಿ ಕೆಲಸ ಮಾಡಬೇಕು. ಮನುಷ್ಯತ್ವ ಇಲ್ಲದವರು ಸಾರ್ವಜನಿಕ ಸೇವೆಗೆ ಬರಬಾರದು. ನಿಮ್ಮ ನಿರ್ಲಕ್ಷ್ಯ ಮತ್ತು ಉಡಾಫೆತನದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಸಿದರು.

ರೈತರಿಗೆ ಕಿರುಕುಳ ಸಹಿಸಲ್ಲ : ರಾಜ್ಯದಲ್ಲಿ 251 ರೈತರ ಆತ್ಮಹತ್ಯೆ ಪ್ರಕರಣ ವರದಿಯಾಗಿದ್ದು, 174 ಪ್ರಕರಣಗಳಷ್ಟೇ ಇತ್ಯರ್ಥವಾಗಿವೆ. ಉಳಿದ ಪ್ರಕರಣಗಳನ್ನೂ ಶೀಘ್ರವೇ ವಿಲೇವಾರಿ ಮಾಡಿ, ಪರಿಹಾರ ವಿತರಿಸಬೇಕು. ಇದರಲ್ಲಿ ವಿಳಂಬ ಸರಿಯಲ್ಲ. ಬರ ಘೋಷಣೆಯಾದ ನಂತರ ಖಾಸಗಿ ಲೇವಾದೇವಿದಾರರ ಮೇಲೆ ನಿಗಾ ಇಡಬೇಕು. ಬ್ಯಾಂಕುಗಳು ರೈತರಿಗೆ ಕಿರುಕುಳ ಕೊಡದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಆರೋಗ್ಯ ಇಲಾಖೆಯಲ್ಲಿ ವೈದ್ಯರು ಲಭ್ಯವಿರುವುದಿಲ್ಲ. ಅರೆ ವೈದ್ಯಕೀಯ ಸಿಬ್ಬಂದಿಯೇ ವೈದ್ಯರ ಪಾತ್ರ ನಿರ್ವಹಿಸುವುದು, ಔಷಧ ಪ್ರಿಸ್ಕ್ರಿಪ್ಷನ್‌ ಬರೆಯುವುದು ಇವೆಲ್ಲ ಆಗಬಾರದು. ವೈದ್ಯರು ತಮ್ಮ ಕೇಂದ್ರ ಸ್ಥಾನದಲ್ಲಿಯೇ ಇದ್ದುಕೊಂಡು ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎನ್ನುವ ಸೂಚನೆ ನೀಡಿದರು.

ಇದಿಷ್ಟೇ ಅಲ್ಲದೆ ಸ್ಮಶಾನಗಳಿಗೆ ಮತ್ತು ಖಬರ್‌ಸ್ತಾನ್‌ಗಳಿಗೆ ಕೂಡಲೇ ಜಾಗ ಒದಗಿಸಬೇಕು. ಶಾಲಾ ಕಟ್ಟಡ, ಅಂಗನವಾಡಿ, ಆರೋಗ್ಯ ಕೇಂದ್ರ ಸ್ಮಶಾನಗಳಿಗೆ ಜಾಗವನ್ನು ಕೂಡಲೇ ಗುರುತಿಸಿ ಕೊಡಬೇಕು, ಸಾರ್ವಜನಿಕರಿಗೆ ಭೇಟಿ ಸಮಯ ನಿಗದಿ ಮಾಡಬೇಕು, ಕೇಂದ್ರ ಕಚೇರಿಯಲ್ಲಿರುವಾಗ ಸಾರ್ವಜನಿಕರಿಗೆ ಸಮಯ ನಿಗದಿ ಮಾಡಬೇಕು. ಆ ಸಮಯದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ, ಕೂಡಲೇ ಪರಿಹಾರ ಒದಗಿಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲೆಯ ಹಿರಿಯ ಅಧಿಕಾರಿಗಳು ಹಾಸ್ಟೆಲ್‌ಗಳು, ಆಸ್ಪತ್ರೆಗಳಿಗೆ ಭೇಟಿ ನೀಡಬೇಕು, ಜಿಲ್ಲಾಧಿಕಾರಿಗಳು ಅಧೀನ ಕಚೇರಿಗಳಿಗೆ ಭೇಟಿ ನೀಡಬೇಕು ಎಂದು ಹೇಳಿದರು.

ಇನ್ನು ತಾಲೂಕು ಮಟ್ಟದಲ್ಲಿ ಸಚಿವರು, ಶಾಸಕರನ್ನು ಆಹ್ವಾನಿಸಿ, ವಾರಕ್ಕೊಮ್ಮೆ ಜನ ಸಂಪರ್ಕ ಸಭೆ ನಡೆಸಿ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ. ಕೇವಲ ಬದಲಾವಣೆಗಾಗಿ ಜನತೆ ಸರ್ಕಾರವನ್ನು ಬದಲಾಯಿಸಿಲ್ಲ. ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡು ಹಿಂದಿನ ಸರ್ಕಾರವನ್ನು ಬದಲಾಯಿಸಿ ನಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದರು.

ಜನರ ನಿರೀಕ್ಷೆಗಳಿಗೆ ತಕ್ಕಂತೆ ಅಧಿಕಾರಿಗಳು ಕೆಲಸ ಮಾಡಬೇಕು. ಶಾಸಕರು, ಮಂತ್ರಿಗಳು, ಅಧಿಕಾರಿಗಳು ಜನ ಸೇವಕರು. ಈ ಸಾಮಾನ್ಯ ತಿಳಿವಳಿಕೆ ಪ್ರತಿಯೊಬ್ಬರಲ್ಲೂ ಇರಬೇಕು. ನಾವು ರಾಜರುಗಳಲ್ಲ. ತಹಸೀಲ್ದಾರ್‌, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬರುವ ಅರ್ಜಿಗಳು ಐದು ವರ್ಷಕ್ಕೂ ಹೆಚ್ಚು ಅವಧಿಗೆ ಬಾಕಿ ಉಳಿದಿರುವುದನ್ನು ಗಮನಿಸಲಾಗಿದೆ. ಐದು ವರ್ಷವಾದರೂ ಪ್ರಕರಣ ಇತ್ಯರ್ಥಪಡಿಸದೆ ಇದ್ದರೆ, ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅರ್ಥ ಎಂದರು.

ನ್ಯಾಯ ವಿಳಂಬವಾದರೆ ನ್ಯಾಯ ನಿರಾಕರಣೆಯಾಗಿದೆ ಎಂದರ್ಥ. ವಿಳಂಬ ಜಾಸ್ತಿಯಾದಷ್ಟು ಭ್ರಷ್ಟಾಚಾರಕ್ಕೆ ಅವಕಾಶ ಸಿಗುತ್ತೆ. ವಿಳಂಬವೂ ಭ್ರಷ್ಟಾಚಾರವೇ. ತಹಸೀಲ್ದಾರರು ಒಂದು ಅರ್ಜಿಯನ್ನು ಸ್ವೀಕರಿಸಿದರೆ, ಮೂರು ತಿಂಗಳಲ್ಲಿ ಇತ್ಯರ್ಥವಾಗಬೇಕು. ಉಪವಿಭಾಗಾಧಿಕಾರಿಗಳ ಬಳಿ ಬರುವ ಮನವಿಗಳ ಇತ್ಯರ್ಥಕ್ಕೆ ಬಹಳ ವಿಳಂಬ ಮಾಡುತ್ತಾರೆ. ಇದನ್ನು ಕನಿಷ್ಠ ಆರು ತಿಂಗಳಲ್ಲಿ ಹಾಗೂ ಜಿಲ್ಲಾಧಿಕಾರಿಗಳು ಒಂದು ವರ್ಷದಲ್ಲಿ ಇತ್ಯರ್ಥ ಮಾಡಬೇಕು ತಾಕೀತು ಮಾಡಿದರು.

ಜಿಲ್ಲಾಧಿಕಾರಿಗಳು ಅನಗತ್ಯವಾಗಿ ಪ್ರಕರಣ ಮುಂದೂಡುವುದು, ಕಕ್ಷಿದಾರರನ್ನು ಕಾಯಿಸುವುದು, ವಾದ-ವಿವಾದಗಳನ್ನು ಆಲಿಸಿದ ನಂತರ ತೀರ್ಪು ಬರೆಯಲು ವಿಳಂಬ ಮಾಡುವುದು ತರವಲ್ಲ. ಪ್ರಕರಣ ಇತ್ಯರ್ಥಗೊಳಿಸಲು ವಿಳಂಬ ಮಾಡಿದರೆ ನಮ್ಮ ಸರ್ಕಾರ ಸಹಿಸಲ್ಲ. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​, ಸಚಿವರಾದ ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್​, ಜಮೀರ್ ಅಹ್ಮದ್ ಖಾನ್​, ದಿನೇಶ್​ ಗುಂಡೂರಾವ್​​, ಚಲುವರಾಯಸ್ವಾಮಿ, ಶಿವಾನಂದ ಪಾಟೀಲ್ ಸೇರಿ ಹಲವರು ಉಪಸ್ಥಿತರಿದ್ದರು.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ