ಬೆಂಗಳೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಇಂದು ಸಮಾಜ ಕಲ್ಯಾಣ ಇಲಾಖೆ ರಾಜ್ಯಾದ್ಯಂತ ಏಕಧ್ವನಿಯಲ್ಲಿ “ಸಂವಿಧಾನ ಪೀಠಿಕೆ ಓದುವ” ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರಂತೆ ವಿಧಾನ ಸೌಧದ ಮುಂಭಾಗ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಿಧಾನದ ಪೀಠಿಕೆ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಬಳಿಕ ಮಾತಮಾಡಿದ ಸಿಎಂ ಸಿದ್ದರಾಮಯ್ಯ ಅವರು, ಸಂವಿಧಾನ ವಿರೋಧಿ ಶಕ್ತಿಗಳು ಸಂವಿಧಾನವನ್ನು ನಾಶಗೊಳಿಸಿ ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸುತ್ತಿವೆ. ಈ ಬಗ್ಗೆ ಎಚ್ಚರ ಮತ್ತು ಜಾಗೃತಿ ಇರಬೇಕು ಎಂದು ನಾಡಿನ ಜನತೆಗೆ ಕಿವಿ ಮಾತು ಹೇಳಿದರು.
ಸಂವಿಧಾನದ ನಾಶ ಮತ್ತು ಮನುಸ್ಮೃತಿಯ ಜಾರಿ ಎಂದರೆ ಶೇ.90 ರಷ್ಟು ಭಾರತೀಯರನ್ನು ಮತ್ತೆ ಗುಲಾಮಗಿರಿಗೆ ತಳ್ಳುವುದಾಗಿದೆ. ಇದಕ್ಕಾಗಿ ಬಹಳ ಕುತಂತ್ರಗಳು ನಡೆಯುತ್ತಿವೆ ಎಂದು ಎಚ್ಚರಿಸಿದರು.
ಸಂವಿಧಾನದ ಆಶಯಗಳನ್ನು ಪರಿಣಾಮಕಾರಿಯಾಗಿ ಅರ್ಥೈಸಿಕೊಂಡು ಪಾಲಿಸದಿದ್ದರೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಸಂವಿಧಾನದ ಸಮ ಸಮಾಜ ಮತ್ತು ಜಾತ್ಯತೀತ ತತ್ವದ ಆಶಯಗಳಂತೆಯೇ ನಮ್ಮ ಸರ್ಕಾರ ಸರ್ವರ ಏಳಿಗೆಯ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಜನರ ಹಣವನ್ನು ಮತ್ತೆ ಜನರ ಬದುಕಿಗೇ ಮರಳಿಸುವುದು ನಮ್ಮ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ 2 ಕೋಟಿಗೂ ಹೆಚ್ಚು ಜನರು ಪಾಲ್ಗೊಂಡು ಏಕ ಧ್ವನಿಯಲ್ಲಿ ಸಂವಿಧಾನ ಓದಿ ದಾಖಲೆ ಬರೆದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಗೃಹ ಸಚಿವ ಜಿ.ಪರಮೇಶ್ವರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಮುನಿಯಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ವಿಧಾನಪರಿಷತ್ ಸಭಾಪತಿ ಹೊರಟ್ಟಿ, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಗೋವಿಂದರಾಜು, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿ ಪೊಲೀಸ್ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.