ಮಂಡ್ಯ: ಕಾವೇರಿ ಕಿಚ್ಚು ಇಂದು ಸೆ.23ರ ಬೆಳಗ್ಗೆಯಿಂದಲೇ ಭಾರಿ ಕಾವು ಪಡೆಯುತ್ತಿದ್ದು, ಹೆದ್ದಾರಿಯನ್ನು ಬಂದ್ ಮಾಡಿ ವಿವಿಧ ರೈತಪರ, ಕನ್ನಡಪರ ಸಂಘಟನೆಗಳು ಮಂಡ್ಯ ಹಾಗೂ ಮದ್ದೂರನ್ನು ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದೆ.
ಮುಂಜಾನೆಯಿಂದಲೇ ಮಂಡ್ಯ ಪೂರ್ತಿ ಬಂದ್ ಆಗಿದ್ದು, ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಮಾಡುತ್ತಿದ್ದಾರೆ. ಇತ್ತ ಪ್ರತಿಭಟನಾ ನಿತತರು ಹೆದ್ದಾರಿಯಲ್ಲಿ ಮಲಗಿ, ಕಬ್ಬಿನ ಜಲ್ಲೆ ಹಿಡಿದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದಿನ ಹೋರಾಟಕ್ಕೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಕೂಡ ಸಾಥ್ ನೀಡುತ್ತಿದ್ದಾರೆ. ಇಂದಿನ ರೈತರ ಹೋರಾಟದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಸಿ.ಟಿ ರವಿ ಹಾಗೂ ಮಧ್ಯಾಹ್ನ 12ಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಆಗಮಿಸಿ ಮಂಡ್ಯದಲ್ಲಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹೋರಾಟದಲ್ಲಿ ಭಾಗಿಗಳಾಗಲಿದ್ದಾರೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಲ್ಲಿ ರೈತರ ಪ್ರತಿಭಟನೆ ಹಲವು ದಿನಗಳಿಂದ ನಡೆಯುತ್ತಿದೆ. ಇಂದು ಮಂಡ್ಯ ಬಂದ್‌ಗೆ ಕರೆ ನೀಡಲಾಗಿದೆ. ಮಂಡ್ಯದ ಸಂಜಯ ವೃತ್ತದಲ್ಲಿ ಟೀ ತಯಾರಿಸುವ ಮೂಲಕ ಪ್ರತಿಭಟನೆಯನ್ನು ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಆಯೋಜಿಸಿದ್ದಾರೆ.
ಕಾವೇರಿ ವಿಚಾರದಲ್ಲಿ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪಿನ ಪ್ರತಿಯಿಂದ ಟೀ ತಯಾರಿಸಿ ಪ್ರತಿಭಟನೆ ನಡೆಯಲಿದೆ. ಹಾಗೆಯೇ ಕಿವಿಗೆ ಹೂ ಮುಡಿದು, ಪಟಪಟ್ಟೆ ಚಡ್ಡಿ ಧರಿಸಿಯೂ ಪ್ರತಿಭಟನೆಗ ಮಾಡಲಾಗುತ್ತಿದೆ. ಮಂಡ್ಯ ಬಂದ್ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್ ಆಗಿದ್ದು, ಭದ್ರತೆಗಾಗಿ 6 ಡಿಎಆರ್, 4 ಕೆ ಎಸ್ ಆರ್ ಪಿ ತುಕಡಿ ಜೊತೆಗೆ 200 ಜನ ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸಿದ್ದಾರೆ.
ಬೆಳಗೆಯಿಂದ ಕಾರ್ಯ ನಿರ್ವಹಿಸ್ತಿದ್ದ ಪೆಟ್ರೋಲ್ ಬಂಕ್‌ಗಳನ್ನು ಬೆಂಬಲ ನೀಡುವಂತೆ ಹಿತ ರಕ್ಷಣಾ ಸಮಿತಿ ಸದಸ್ಯರು ಬಂದ್ ಮಾಡಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ರ್ಯಾಪಿಡ್ ಆಕ್ಸನ್ ಪೋರ್ಸ್ ಆಗಮಿಸಿದ್ದು, ಮಂಡ್ಯದ ಸಂಜಯ ವೃತ್ತದಲ್ಲಿ ನಿಯೋಜಿಸಲಾಗಿದೆ. ಬೆಳವಣಿಗೆಗಳ ಮೇಲೆ ಭದ್ರತಾ ಸಿಬ್ಬಂದಿ ನಿಗಾ ವಹಿಸಿದ್ದಾರೆ. ಪ್ರತಿಭಟನೆ ತೀವ್ರಗೊಂಡಿದ್ದು, ಹೆದ್ದಾರಿಯಲ್ಲೇ ಮಲಗಿ ಪ್ರತಿಭಟಿಸುತ್ತಿದ್ದಾರೆ.
ಇನ್ನು ಮದ್ದೂರು ಪಟ್ಟಣದಲ್ಲಿಯೂ ಬಹುತೇಕ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಸ್ವಯಂ ಪ್ರೇರಿತರಾಗಿ ಬಂದ್‌ಗೆ ಸಹಕರಿಸಲು ವರ್ತಕರು ನಿರ್ಧರಿಸಿದ್ದಾರೆ. ಮಂಡ್ಯ ಬಂದ್ ಹಿನ್ನೆಲೆಯಲ್ಲಿ ಮೆಡಿಕಲ್ ಶಾಪ್, ಹಾಲಿನ ಮಳಿಗೆಗಳು, ಹೋಟೆಲ್ ಸೇರಿ ಅತ್ಯಗತ್ಯ ಸೇವೆಗಳು ಮಾತ್ರ ಲಭ್ಯವಿವೆ. ಸಾರ್ವಜನಿಕ ಆಸ್ಪತ್ರೆಗಳು ಎಂದಿನಂತೆ ಸೇವೆಗೆ ಲಭ್ಯವಿವೆ.
ಮಂಡ್ಯ ರೈತ ಹಿತ ರಕ್ಷಣಾ ಸಮಿತಿ ಬಂದ್‌ಗೆ ಕರೆ ನೀಡಿದ್ದು, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬಾರದ ಎಂದು ಆಗ್ರಹಿಸಿ ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ತನಕ ಮಂಡ್ಯ ಸಂಪೂರ್ಣ ಬಂದ್ ಮಾಡಲಾಗುವುದು. ಬಂದ್‌ಗೆ ಸ್ವಯಂಪ್ರೇರಿತವಾಗಿ ಸಾರ್ವಜನಿಕರು ಬೆಂಬಲ ನೀಡಿದ್ದಾರೆ.