ಮೈಸೂರು: ಕಾವೇರಿ ಒಡಲು ಬರಿದಾಗಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದ್ದು ಇದನ್ನು ವಿರೋಧಿಸಿ ಪ್ರತಿಭಟನೆ ಮುಂದುವರಿದಿದ್ದು, ಈ ಪ್ರತಿಭಟನೆಗಳ ನಡುವೆಯೇ ಕಾವೇರಿ ನೀರು ಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಮವಾರ ತಮಿಳುನಾಡಿಗೆ ಸುಮಾರು 6,716 ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ.
ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಇಂದು (ಸೋಮವಾರ ಸೆ.25) ಹೊರ ಹೋಗುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಇದು ಹೀಗೆಯೇ ಮುಂದುವರಿದರೆ ಇನ್ನು ಕೆಲವೇ ದಿನಗಳಲ್ಲಿ ಕಾವೇರಿ ಕೊಳ್ಳದ ಹೇಮಾವತಿ, ಹಾರಂಗಿ ಮತ್ತು ಕೆಆರ್‌ಎಸ್ ಜಲಾಶಯಗಳು ಖಾಲಿಯಾಗುವುದರಲ್ಲಿ ಅನ್ಯ ಮಾತಿಲ್ಲ.
ಸಾಮಾನ್ಯವಾಗಿ ಈ ದದಿನಗಳಲ್ಲಿ ಕೊಡಗು ಸೇರಿದಂತೆ ಹಾಸನ, ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಮಳೆಯಾಗುತ್ತಿತ್ತು. ಹಾಗಾಗಿ ನೀರು ಜಲಾಶಯಗಳಿಗೆ ಹರಿದು ಬರುತ್ತಿತ್ತು. ಆದರೆ ಈ ಬಾರಿ ಈ ದಿನಗಳಲ್ಲಿ ಮಳೆ ಎಲ್ಲ ಕಡೆ ಸುರಿಯುತ್ತಿಲ್ಲ. ಆದ್ದರಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಹೋದರೆ ಜಲಾಶಯ ಖಾಲಿಯಾಗುವುದು ಖಚಿತ. ಸದ್ಯ ತಮಿಳುನಾಡಿಗೆ ಕೆಆರ್‌ಎಸ್‌ನಿಂದ 4 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದರೆ, ಕಬಿನಿ ಜಲಾಶಯದಿಂದ 2,500 ಕ್ಯೂಸೆಕ್, ನೀರನ್ನು ಬಿಡಲಾಗಿದೆ. ಒಟ್ಟಾರೆ ತಮಿಳುನಾಡಿಗೆ 6,605 ಕ್ಯೂಸೆಕ್ ನೀರು ಸದ್ಯ ಹರಿದು ಹೋಗುತ್ತಿದೆ.
ಇನ್ನು ಕಳೆದ ಎರಡು ದಿನಗಳಲ್ಲಿ ಎಷ್ಟು ನೀರನ್ನು ಕೆಆರ್‌ಎಸ್ ನಿಂದ ಬಿಡಲಾಗಿತ್ತು ಎಂಬುದನ್ನು ನೋಡುತ್ತಾ ಹೋದರೆ. ನಿನ್ನೆ ಶನಿವಾರ 2,973 ಕ್ಯುಸೆಕ್, ಭಾನುವಾರ 3,838 ಕ್ಯುಸೆಕ್ ನೀರನ್ನು ಬಿಡಲಾಗಿತ್ತು. ಆದರೆ ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಹಳೇ ಮೈಸೂರು ವ್ಯಾಪ್ತಿಯಲ್ಲಿ ಪ್ರತಿಭಟನೆ ತೀವ್ರವಾದ ಬಳಿಕವೂ ಹರಿದು ಹೋಗುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗದೆ ಹೆಚ್ಚಾಗುತ್ತಿರುವುದು ಕಾವೇರಿ ಕೊಳ್ಳದ ರೈತರು ಮತ್ತು ಜನರನ್ನು ಆತಂಕಕ್ಕೆ ತಳ್ಳಿದೆ.
ಇನ್ನು ಗರಿಷ್ಠ 124.80 ಅಡಿಗಳ ಕೆಆರ್‌ಎಸ್ ಜಲಾಶಯದಲ್ಲಿ ಸದ್ಯ 96.70 ಅಡಿಗಳಷ್ಟು ನೀರಿದೆ. ಜಲಾಶಯ ಭರ್ತಿಯಾದರೆ 49.452 ಟಿಎಂಸಿ ನೀರು ಸಂಗ್ರವಾಗುತ್ತದೆ. ಆದರೆ ಈಗ ಇರುವ ನೀರಿನ ಪ್ರಮಾಣ 20.334 ಟಿಎಂಸಿ ಮಾತ್ರ. ಜಲಾಶಯಕ್ಕೆ ನದಿಯ ಮೂಲಕ 5,993 ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೆ, 6,716 ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ. ಕೊಡಗು ವ್ಯಾಪ್ತಿಯಲ್ಲಿ ಸ್ವಲ್ಪ ಮಳೆಯಾಗುತ್ತಿರುವುದರಿಂದ ಸುಮಾರು ಐದು ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಆದರೆ ಅಲ್ಲಿ ಮಳೆ ಬಾರದೆ ಹೋದರೆ ಒಳ ಹರಿವಿನ ಪ್ರಮಾಣ ಕುಸಿಯಲಿದೆ.
ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಮುಂದಿನ ಮುಂಗಾರು ತನಕ ಕುಡಿಯುವ ನೀರನ್ನೂ ಒದಗಿಸುವುದೇ ಕಷ್ಟವಾಗಲಿದೆ. ದಿನ ಕಳೆದಂತೆ ಸೂರ್ಯನ ಪ್ರಖರತೆ ಹೆಚ್ಚುತ್ತಾ ಹೋದರೆ ಜಲಾಶಯದ ನೀರು ಆವಿಯಾಗಿ ಒಂದಷ್ಟು ನೀರಿನ ಪ್ರಮಾಣ ಕುಸಿತವಾಗಲಿದೆ. ಒಟ್ಟಾರೆ ಕಾನೂನಾತ್ಮಕವಾಗಿ ಸಂಕಷ್ಟ ಸೂತ್ರವನ್ನು ಕಂಡು ಹಿಡಿಯದೆ ಹೋದರೆ ಮುಂದಿನ ದಿನಗಳು ಸಂಕಷ್ಟದ ದಿನಗಳಾಗಿರುವುದರಲ್ಲಿ ಎರಡು ಮಾತಿಲ್ಲ. – LK