ಬೆಂಗಳೂರು: ಕೊನೆಯ ಕ್ಷಣಗಳಲ್ಲಿ ಬೆಂಗಳೂರು ಬಂದ್‌ಗೆ ಅನುಮತಿ ನಿರಾಕರಿಸುವ ಮೂಲಕ ರಾಜ್ಯ ಸರ್ಕಾರ ನಾಡಿನ ಜನತೆಗೆ ದ್ರೋಹ ಬಗೆದಿದೆ. ನಮ್ಮ ಜನರ ಕುಡಿಯುವ ನೀರಿಗಾಗಿ, ನಮ್ಮ ಜನರ ಬದುಕಿಗಾಗಿ ಹೋರಾಡುವುದಕ್ಕೂ ಅನುಮತಿ ನಿರಾಕರಿಸುತ್ತಿರುವುದು ದುಃಖಕರ ವಿಚಾರ ಎಂದು ಎಎಪಿ ಮುಖಂಡ ಜಗದೀಶ್ ವಿ. ಸದಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ನಾಡಿನ ಹಿತಾಸಕ್ತಿಯನ್ನು ಕಡೆಗಣಿಸಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. 150ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲಕ್ಕೆ ನಿಂತಿವೆ.ಶಾಲೆಗಳು, ಖಾಸಗಿ ಬಸ್, ಓಲಾ, ಉಬರ್, ಟ್ಯಾಕ್ಸಿ, ಆಟೋ, ಗೂಡ್ಸ್ ವಾಹನ, ಎಪಿಎಂಸಿ ಮಾರುಕಟ್ಟೆ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಮಾಲ್, ಮಲ್ಟಿಪ್ಲೆಕ್ಸ್‌ಗಳು, ಅಂಗಡಿ ಮಳಿಗೆಗಳು, ಕೈಗಾರಿಕೆಗಳು ಸ್ವಯಂ ಪ್ರೇರಣೆಯಿಂದ ಬಂದ್‌ಗೆ ಬೆಂಬಲ ನೀಡಿವೆ.
ಆದರೆ ರಾಜ್ಯ ಸರ್ಕಾರ ಬಂದ್‌ಗೆ ಅವಕಾಶ ನೀಡದೆ ರಾಜ್ಯಕ್ಕೆ ದ್ರೋಹ ಬಗೆಯುತ್ತಿದೆ. ಪೊಲೀಸ್ ಇಲಾಖೆಯ ಮೂಲಕ ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ಇದು ಖಂಡನಾರ್ಹ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರ ಉಳಿಸಿಕೊಳ್ಳಲು ರಾಜ್ಯದ ಹಿತಾಸಕ್ತಿಯನ್ನು ಬಲಿಕೊಡುತ್ತಿರುವುದು ನಾಚಿಕೆಗೇಡಿನ ವಿಚಾರ. ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾಗುವ ಮೂಲಕ ನಾಡಿನ ಜನರ ಶಾಪಕ್ಕೆ ಗುರಿಯಾಗುವುದು ನಿಶ್ಚಿತ. ನಾಡಿನ ಜನತೆ ನೀರಿನ ಬಗ್ಗೆ ಮನವರಿಕೆ ಮಾಡಿಕೊಂಡಿದ್ದಾರೆ, ಸ್ವಯಂ ಪ್ರೇರಣೆಯಿಂದ ಬೀದಿಗಿಳಿಯುತ್ತಿದ್ದಾರೆ, ಬೆಂಗಳೂರು ಬಂದ್ ಹತ್ತಿಕ್ಕಲು ಯಾರಿಗೂ ಸಾಧ್ಯವಿಲ್ಲ. ಬಂದ್ ಯಶಸ್ವಿಯಾಗೇ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.