NEWSನಮ್ಮರಾಜ್ಯಲೇಖನಗಳು

KSRTC ಬಸ್‌ಗಳ ಕಂಡಕ್ಟರ್‌ಗಳನ್ನು ನಿದ್ದೆಯಲ್ಲೂ ಬೆಚ್ಚಿ ಬೀಳಿಸುತ್ತಿದೆ ಶಕ್ತಿ ಯೋಜನೆ..!! ಅಮಾನತಿನ ಭಯದಲ್ಲೇ ಡ್ಯೂಟಿ..!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿಯೋಜನೆಯಿಂದ ಸರ್ಕಾರಿ ಸಾರಿಗೆ ಬಸ್‌ಗಳ ಕಂಡಕ್ಟರ್‌ಗಳು ನಿದ್ದೆಯಲ್ಲೂ ಬೆಚ್ಚಿ ಬೀಳುತ್ತಿದ್ದಾರೆ.

ಹೌದು! ಲಾಸ್‌ನಲ್ಲಿ ನಡೆಯುತ್ತಿದ್ದ ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ ಶಕ್ತಿಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವುದರಿಂದ ಆರ್ಥಿಕವಾಗಿ ಬಲವನ್ನೇನೋ ತುಂಬಲಾಗುತ್ತಿದೆ. ಆದರೆ ತಮ್ಮದಲ್ಲದ ತಪ್ಪಿಗೆ ಕಂಡಕ್ಟರ್‌ಗಳು ಅಮಾನತು ಶಿಕ್ಷೆ ಅನುಭವಿಸುವಂತಾಗಿದೆ. ಇದು ಸಾರಿಗೆ ನಿಗಮಗಳ ಅಧಿಕಾರಿಗಳಿಗೆ ಗೊತ್ತಿದ್ದರೂ ಕಂಡಕ್ಟರ್‌ಗಳನ್ನು ಟಾರ್ಗೆಟ್‌ ಮಾಡುತ್ತಿದ್ದಾರೆಯೇ ಎಂಬುವುದು ಪ್ರಶ್ನೆಯಾಗಿಯೇ ಉಳಿಯುತ್ತಿದೆ.

ವಾಸ್ತವವಾಗಿ ಪ್ರಯಾಣಿಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಯೋಜನೆಯಿಂದ ಮಹಿಳೆಯರಿಗೆ ಅದರಲ್ಲೂ ರಾಜ್ಯದ ಮಹಿಳೆಯರಿಗೆ ಅನುಕೂಲ ತಂದಿರುವ ಗ್ಯಾರಂಟಿ ಯೋಜನೆ ಇದೀಗ ಸಾರಿಗೆ ಸಂಸ್ಥೆಗಳ ನಿರ್ವಾಹಕರ ಪಾಲಿಗೆ ಮೊಗ್ಗಲುಮುಳ್ಳಾಗಿ ಪರಿಣಮಿಸುತ್ತಿದ್ದು, ಡ್ಯೂಟಿ ಮಾಡುವುದಕ್ಕೂ ನೌಕರರು ಭಯಪಡುವಂತಾಗಿದೆ.

ಕಂಡಕ್ಟರ್‌ಗಳ ಮೇಲೆ ಕೇಳಿ ಬರುತ್ತಿರುವ ಆರೋಪವೇನು? ಪ್ರಯಾಣಿಸಿದ್ದಕ್ಕಿಂತ ಹೆಚ್ಚು ದರದ ಟಿಕೆಟ್‌ ನೀಡುತ್ತಿದ್ದಾರೆ. ಒಬ್ಬರು ಪ್ರಯಾಣಿಕರಿಗೆ ಎರಡು ಟಿಕೆಟ್‌ಗಳನ್ನು ನೀಡುತ್ತಿದ್ದಾರೆ. ಇಲ್ಲ ಬೇರೆ ರಾಜ್ಯದವರಿಗೆ ಟಿಕೆಟ್‌ ವಿತರಣೆ ಮಾಡಿದ್ದಾರೆ. ಮೂವರಿದ್ದಾರೆ ಆದರೆ ನಾಲ್ಕು ಮಂದಿಗೆ ಟಿಕೆಟ್‌ ಕೊಟ್ಟಿದ್ದಾರೆ. ಹೀಗೆ ಹಲವಾರು ರೀತಿಯಲ್ಲಿ ಕಂಡಕ್ಟರ್‌ಗಳನ್ನು ಟಾರ್ಗೆಟ್‌ ಮಾಡಿ ಅಮಾನತು ಮಾಡಲಾಗುತ್ತಿದೆ ಎಂಬ ಆರೋಪ ನಾಲ್ಕೂ ನಿಗಮಗಳ ನೌಕರರಿಂದ ಕೇಳಿ ಬರುತ್ತಿದೆ.

50 ಕ್ಕೂ ಹೆಚ್ಚು ಕಂಡಕ್ಟರ್‌ಗಳ ಅಮಾನತು: ಈಗಾಗಲೇ 50ಕ್ಕೂ ಹೆಚ್ಚು ಕಂಡಕ್ಟರ್‌ಗಳನ್ನು ಈ ಆರೋಪಗಳಡಿ ಅಮಾನತು ಮಾಡಲಾಗಿದೆ. ಹೀಗೆ ನಿರ್ವಾಹಕರನ್ನು ಅಮಾನತುಗೊಳಿಸಿರುವುದರಿಂದ ಉಳಿದವರಿಗೆ ಕೆಲಸ ಮಾಡುವ ಆಸಕ್ತಿ ಕುಂದುವಂತೆ ಮಾಡಿದೆ. ಜತೆಗೆ ಎದೆಬಡಿತವನ್ನು ಹೆಚ್ಚಿಸಿದೆ. ಸರ್ಕಾರ ಶಕ್ತಿ ಯೋಜನೆಗೆ ಚಾಲನೆ ನೀಡಿದ ಬಳಿಕ ಇಡೀ ರಾಜ್ಯಾದ್ಯಂತ ಬಸ್‌ಗಳಲ್ಲಿ ಓಡಾಡುವ ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ.80ರಷ್ಟಿದೆ. ಆದರೆ, ತಪ್ಪು ಮಾಡುವ ಮಹಿಳಾ ಪ್ರಯಾಣಿಕರಿಂದ ದಂಡ ವಸೂಲಿ ಮಾಡುವ ಬದಲಿಗೆ ಕಂಡಕ್ಟರ್‌ಗಳಿಗೆ ಶಿಕ್ಷೆ ನೀಡುತ್ತಿರುವುದು ಏಕೆ?

ಈ ಬಗ್ಗೆ ಆಯಾಯಾ ಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಏಕೆ ಸತ್ಯವನ್ನು ಅರಿಯುತ್ತಿಲ್ಲ ಎಂಬ ಪ್ರಶ್ನೆಯೂ ನೌಕರರನ್ನು ಕಾಡುತ್ತಿದೆ. ಅಧಿಕಾರಿಗಳಿಗೆ ಯಾರು ತಪ್ಪು ಮಾಡಿದ್ದಾರೆ ಎಂಬುದರ ಅರಿವಿದೆ. ಆದರೆ ಅವರು ಮಹಿಳೆಯರಿಗೆ ಉಚಿತ ಪ್ರಯಾಣ ಅಂತ ಶಕ್ತಿ ಯೋಜನೆ ಜಾರಿಗೆ ತಂದಿರುವುದರಿಂದ ಅವರು ಟಿಕೆಟ್‌ ತೆಗೆದುಕೊಳ್ಳದಿದ್ದರೂ ಅವರನ್ನು ಬಿಟ್ಟು ಕಳುಹಿಸಬೇಕಾದ ಅನಿವಾರ್ಯತೆ ಇದೆ. ಕಾರಣ ಉಚಿತ ಅಂತ ಹೇಳಿ ದಂಡವಸೂಲಿ ಮಾಡುತ್ತಿದ್ದಾರೆ ಎಂದು ಎಲ್ಲಿ ಮಹಿಳಾ ಪ್ರಯಾಣಿಕರು ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೋ ಎಂಬ ಭಯ.

ಆದರೆ, ನಮ್ಮ ನಿಗಮಗಳಲ್ಲಿ ಟಿಕೆಟ್‌ರಹಿತ ಪ್ರಯಾಣ ಮಾಡಿದರೆ ದಂಡ ಕಟ್ಟಬೇಕು ಎಂಬ ನಿಯಮವಿದೆ ಎಂಬುದರ ಬಗ್ಗೆ ಅಧಿಕಾರಿಗಳು ಅರಿವು ಮೂಡಿಸುವ ಬದಲಿಗೆ ಇಲ್ಲಿ ಕಂಡಕ್ಟರ್‌ಗಳನ್ನು ಹರಕೆ ಕುರಿಮಾಡುತ್ತಿದ್ದಾರೆ. ಟಿಕೆಟ್‌ ತೆಗೆದುಕೊಳ್ಳದ ಒಂದು ವೇಳೆ ಟಿಕೆಟ್‌ ತೆಗೆದುಕೊಂಡು ಅವರು ಟಿಕೆಟ್‌ ಪಡೆದ ನಿಲ್ದಾಣಕ್ಕಿಂತ ಹಿಂದಿನ ನಿಲ್ದಾಣದಲ್ಲೇ ಇಳಿದು ಹೋದರೂ ಆ ಜವಾಬ್ದಾರಿ ಕಂಡಕ್ಟರ್‌ಗಳ ಮೇಲೆ ಹಾಕಿ ಆ ಕಂಡಕ್ಟರ್‌ಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿಮಾಡಿ ತದನಂತರ ಕೊಟ್ಟಿರುವ ಉತ್ತರ ಸಮಂಜಸವಾಗಿಲ್ಲ ಎಂದು ಅಮಾನತು ಮಾಡುತ್ತಾರೆ.

ಇದಕ್ಕೂ ಕಾರಣವು ಇಲ್ಲದಂತಿಲ್ಲ. ಅದೇನೆಂದರೆ ಲೈನ್‌ ಚೆಕಿಂಗ್‌ಗೆ ಬರುವ ತನಿಖಾ ಸಿಬ್ಬಂದಿಗಳಿಗೆ ಟಾರ್ಗೆಟ್‌ ಕೊಟ್ಟಿರುತ್ತಾರೆ ಅವರು ಮಾರ್ಗ ಮಧ್ಯೆ ಬಸ್‌ಗಳನ್ನು ಹತ್ತಿ ತನಿಖೆ ಮಾಡಿದಾಗ ಸಾಮಾನ್ಯವಾಗಿ ಕಂಡಕ್ಟರ್‌ಗಳು ಪ್ರಮಾಣಿಕವಾಗಿ ಕರ್ತವ್ಯ ಮಾಡುತ್ತಿರುವುದು ಸಾಬೀತಾಗಿದೆ. ಆದರೆ ಈ ತನಿಖಾ ಸಿಬ್ಬಂದಿಗಳು ತಮಗೆ ಕೊಟ್ಟಿರುವ ಟಾರ್ಗೆಟ್‌ ತಲುಪದೆ ಹೋದರೆ ಅವರನ್ನು ಮೇಲಧಿಕಾರಿಗಳು ತರಾಟೆಗೆ ತೆದುಕೊಳ್ಳುತ್ತಾರೆ, ಹೀಗಾಗಿ ಅಮಾಯಕ ಕಂಡಕ್ಟರ್‌ಗಳನ್ನು ಇಲ್ಲಿ ಬಲಿಪಶುಮಾಡಲಾಗುತ್ತಿದೆ ಎಂದು ನೌಕರರು ಆರೋಪ ಮಾಡುತ್ತಿದ್ದಾರೆ.

 ಟಿಕೆಟ್‌ ವಿತರಿಸುವ ಅಗತ್ಯವೇನಿದೆ: ಅದೇನೆ ಇರಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಎಂದ ಮೇಲೆ ಅವರಿಗೆ ಟಿಕೆಟ್‌ ವಿತರಿಸುವ ಅಗತ್ಯವೇನಿದೆ. ಈಗಾಗಲೇ ಶಕ್ತಿ ಯೋಜನೆ ಜಾರಿಗೆ ಬಂದು ಮೂರು ತಿಂಗಳು ಕಳೆದಿದೆ ಹೀಗಾಗಿ ಈ ಮೂರು ತಿಂಗಳ ಸಾರಾಸರಿ ಮಹಿಳಾ ಪ್ರಯಾಣಿಕ ಲೆಕ್ಕ ತೆಗೆದುಕೊಂಡು ಸರ್ಕಾರ ತಿಂಗಳಿಗೆ ಇಂತಿಷ್ಟು ಎಂದು ನಿಗದಿ ಮಾಡಿ ಆ ಹಣವನ್ನು ಪ್ರತಿ ತಿಂಗಳು ಆಯಾಯಾ ನಿಗಮಗಳಿಗೆ ಕೊಟ್ಟರೆ ಆಯಿತು. ಇದರಿಂದ ಕಂಡಕ್ಟರ್‌ಗಳಿಗೂ ಆಗುತ್ತಿರುವ ಸಮಸ್ಯೆ ತಪ್ಪುತ್ತದೆ ಅಲ್ಲವೇ?

ಇನ್ನು ಕಂಡಕ್ಟರ್‌ಗಳು ಕಡ್ಡಾಯವಾಗಿ ಮಹಿಳೆಯರ ಐಡಿ ಕಾರ್ಡ್‌ ಅಂದರೆ ಸದ್ಯಕ್ಕೆ ಗುರುತಿಸುತ್ತಿರುವ ಆಧಾರ್‌ ಕಾರ್ಡ್‌ಗಳನ್ನು ಪರಿಶೀಲನೆ ಮಾಡಬೇಕು. ಆದರೆ, ಅವರು ಕರ್ನಾಟಕದವರೆ ಎಂದು ಖಚಿತವಾದ ಮೇಲೆ ಅವರಿಗೆ ಟಿಕೆಟ್‌ ವಿತರಿಸುವ ಅಗತ್ಯವಿಲ್ಲ ಎಂದು ಸರ್ಕಾರ ಮತ್ತು ನಿಗಮಗಳ ಆಡಳಿತ ಮಂಡಳಿ ಸೂತ್ತೋಲೆ ಹೊರಡಿಸಬೇಕು. ಇದರಿಂದ ಕಂಡಕ್ಟರ್‌ಗಳಿಗೆ ಕೆಲಸದ ಒತ್ತಡವು ತಪ್ಪುತ್ತದೆ ರಾಜ್ಯದ ಮಹಿಳೆಯರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋದಂತೆಯೂ ಆಗುತ್ತದೆ.

ಆದರೆ ಇದಾವುದನ್ನು ಮಾಡದೆ, ಮಹಿಳಾ ಪ್ರಯಾಣಿಕರಿಗೆ ಟಿಕೆಟ್‌ ಕೊಡಿ ಎಂದು ಅದು ಉಚಿತವಾಗಿರಲಿ ಎಂದು ಸುಖಸುಮ್ಮನೆ ಕಂಡಕ್ಟರ್‌ಗಳನ್ನು ಕೆಲಸದ ಒತ್ತಡಕ್ಕೆ ಸಿಲುಕಿಸುವುದು ಏಕೆ. ಅಲ್ಲದೆ ಯಾರೋ ತಿಳಿಗೇಡಿ ಮಹಿಳಾ ಪ್ರಯಾಣಿಕರೊಬ್ಬಿಬ್ಬರು ಮಾಡಿದ ತಪ್ಪಿಗೆ ಕಂಡಕ್ಟರ್‌ಗಳನ್ನು ಅಮಾನತು ಮಾಡಿ ಮಾನಸಿಕ ಹಿಂಸೆ ಕೊಡುವುದು ಏಕೆ? ಇನ್ನಾದರೂ ಈ ಬಗ್ಗೆ ಸೂಕ್ತ ಕ್ರಮವಹಿಸಿಬೇಕು ಎಂದು ನೌಕರರು ಸಂಬಂಧಪಟ್ಟ ಸಚಿವರು, ಆಡಳಿತ ವರ್ಗಕ್ಕೆ ಮನವಿ ಮಾಡಿದ್ದಾರೆ.

ಕಂಡಕ್ಟರ್‌ಗಳಿಗೆ ಕಂಟಕವಾಗುತ್ತಿರುವ ಶಕ್ತಿ

ಶಕ್ತಿ ಯೋಜನೆ ಜಾರಿ ಸಮಯದಲ್ಲಿ ಮಹಿಳಾ ಪ್ರಯಾಣಿಕರು ತಮ್ಮ ಗುರುತಿನ ಚೀಟಿಯ ಮೂಲ ಪ್ರತಿಯನ್ನು ಕೊಂಡೊಯ್ಯಬೇಕೆಂದು ಸರ್ಕಾರ ಹಾಗೂ ಸಾರಿಗೆ ನಿಗಮ ಸೂಚಿಸಿದೆ. ಆದರೆ, ಬಸ್‌ನಲ್ಲಿ ಸಂಚರಿಸುವ ವೇಳೆ ದಾಖಲಾತಿಯ ಮೂಲ ಪ್ರತಿ ಕಳೆದುಹೋದರೆ ಎಂಬ ಭೀತಿಯಲ್ಲಿ ಜೆರಾಕ್ಸ್ ನಕಲು ತೋರಿಸಿ ಟಿಕೆಟ್ ಪಡೆಯುತ್ತಿದ್ದಾರೆ. ಅಂತವರನ್ನು ಒರಿಜಿನಲ್ ಐಡಿ ತೋರಿಸಿ ಎಂದು ಕೇಳಿದರೆ ಕಂಡಕ್ಟರ್ ಜತೆ ಜಗಳಕ್ಕೆ ಇಳಿಯುವುದರೊಂದಿಗೆ ಮಹಿಳಾ ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ ಎಂದು ಮೇಲಿನ ಅಧಿಕಾರಿಗಳಿಗೆ ದೂರು ನೀಡಿ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಿರುವುದು ಒಂದೆಡೆ ಯಾದರೆ, ಇತ್ತ ಇಲಾಖೆಯ ಅಧಿಕಾರಿಗಳು ಹೆಚ್ಚು ಉಚಿತ ಟಿಕೆಟ್ ನೀಡಿದ್ದಾರೆ ಎಂದು ಟಾರ್ಗೆಟ್ ಮಾಡುತ್ತಿದ್ದು. ಅಕ್ಷರಶಃ ಶಕ್ತಿಯೋಜನೆ ಕಂಡಕ್ಟರ್‌ಗಳ ಪಾಲಿಗೆ ಕಂಟಕವಾಗುತ್ತಿದೆ.
l ನೋವು ತೋಡಿಕೊಂಡ ಹೆಸರೇಳಲಿಚ್ಛಿಸದ ನೌಕರರು

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...