ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಶುಕ್ರವಾರವಾದ ಇಂದು ಕರ್ನಾಟಕ ಬಂದ್ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕವಾಘಿ ಇಡೀ ರಾಜ್ಯವೇ ಸ್ತಬ್ಧಗೊಂಡಿರುವುದರಿಂದ ಸಾರಿಗೆ ಬಸ್‌ಗಳು ಪ್ರಯಾಣೀಕರಿಲ್ಲದೆ ಖಾಲಿಯಾಗಿಯೇ ಓಡಾಡುತ್ತಿವೆ.
ನೂರಾರು ಸಂಘಟನೆಗಳು ರಸ್ತೆಗಿಳಿದಿರುವುದರಿಂದ ಬಂದ್ಗೆ ಸ್ವಯಂಪ್ರೇರಿತರಾಗಿ ನಾಡಿನ 7 ಕೋಟಿ ಜನರು ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ಮಂಗಳೂರು ಭಾಗ ಹೊರತುಪಡಿಸಿ ಇಡೀ ರಾಜ್ಯವೇ ಸ್ತಬ್ಧವಾಗಿದೆ. ಈ ಮೂಲಕ ಬಂದ್ ಯಶಸ್ವಿಯಾಗುತ್ತಿದೆ.
ಇದರ ನಡುವೆಯೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಶೇ.40ರಷ್ಟು ಬಸ್‌ಗಳನ್ನು ರಸ್ತೆಗಿಳಿಸಲಾಗಿದೆ. ಆದರೆ, ಆ ಬಸ್‌ಗಳೂ ಕೂಡ ಪ್ರಯಾಣಿಕರಿಲ್ಲದೆ, ಒಬ್ಬಿಬ್ಬರು ಪ್ರಯಾಣಿಕರನ್ನೇ ಕರೆದುಕೊಂಡು ಹೋಗುತ್ತಿವೆ. ಇದರಿಂದ ಸಾರಿಗೆ ನಿಗಮಕ್ಕೆ ಕೋಟ್ಯಂತರ ರೂಪಾಯಿ ನಷ್ಟವೂ ಆಗುತ್ತಿದೆ ಎಂದು ಹೆಸರೇಳಲಿಚ್ಛಿಸದ ಅಧಿಕಾರಿಯೊಬ್ಬರು ವಿಜಯಪಥಕ್ಕೆ ತಿಳಿಸಿದ್ದಾರೆ.
ಕುರುಬೂರು ಶಾಂತಕುಮಾರ್ ಆಕ್ರೋಶ: ಪ್ರಮುಖವಾಗಿ ಬೆಂಗಳೂರಿನ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಆಗುತ್ತಿರುವುದು ಕಾವೇರಿ ನದಿ ನೀರಿನಿಂದ. ಈ ಹಿನ್ನೆಯಲ್ಲಿ ಪ್ರಸ್ತುತ ಬೆಳೆ ಬೆಳೆಯುವುದಕ್ಕೆ ನೀರಿಲ್ಲ. ಇನ್ನು ಕುಡಿಯಲಿಕ್ಕೂ ನೀರಿಲ್ಲದ ಪರಿಸ್ಥಿತಿಗೆ ರಾಜ್ಯವನ್ನು ಅದರಲ್ಲೂ ಬೆಂಗಳೂರಿಗರನ್ನು ದೂಡಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಟಾಳ್ ನಾಗರಾಜ್ ಆಗ್ರಹ: ಇತ್ತ ಮಂಡ್ಯ, ಚಾಮರಾಜನಗರ, ಹಾಸನ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಳಗಾವಿ ಸೇರಿದಂತೆ ನಾಡಿನಾದ್ಯಂತ ಬಂದ್ ಬಿಸಿ ಜೋರಾಗಿದೆ. ಈ ಮೂಲಕ ಸರ್ಕಾರ ಎಚ್ಚೆತ್ತುಕೊಂಡು ಕೂಡಲೇ ನೀರು ನಿಲ್ಲಿಸಬೇಕು ಎಂದು ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಒಟ್ಟಾರೆ ಕರ್ನಾಟಕ ಬಂದ್ ಹಿನ್ನೆಲೆ ಸಾರಿಗೆ ನಿಗಮಗಳ ಬಸ್‌ಗಳು ಹಾಗೂ ನಮ್ಮ ಮೆಟ್ರೋದಲ್ಲೂ ಜನರ ಓಡಾಟ ವಿರಳವಾಗಿದ್ದು, ರಾಜ್ಯದ ಬಹುತೇಕ ಎಲ್ಲ ಬಸ್ ನಿಲ್ದಾಣಗಳು ಜನರಿಲ್ಲದೆ ಬಿಕೋ ಎನುತ್ತಿವೆ. ಇನ್ನು ರಸ್ತೆಗಿಳಿದಿರುವ ಕನ್ನಡಪರ, ರೈತಪರ ಸಂಘಟನೆಗಳು ಸೇರಿದಂತೆ ರಾಜ್ಯದ ಎಲ್ಲ ಸಂಘಟನೆಗಳು ಇಂದಿನ ಬಂದ್‌ನಲ್ಲಿ ಭಾಗಿಯಾಗುವ ಮೂಲಕ ಹೋರಾಟವನ್ನು ತೀವ್ರಗೊಳಿಸಿದ್ದಾರೆ.