ಮೈಸೂರು: ಹುಲ್ಲಹಳ್ಳಿ ಸಮೀಪದ ಮಾದನಹಳ್ಳಿ ಗ್ರಾಮದ ಜಮೀನುವೊಂದರಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು, ಸಾರ್ವಜನಿಕರು ಮತ್ತು ರೈತರು ಭಯಭೀತರಾಗಿದ್ದಾರೆ.
ಈಗಾಗಲೇ ಈ ವ್ಯಾಪ್ತಿಯ ರೈತರು ಕಾಡಾನೆ, ಚಿರತೆಗಳ ಭಯದಲ್ಲಿಯೇ ಕಾಲ ಕಳೆಯುತ್ತಿದ್ದು, ಇದರ ನಡುವೆ ಹುಲಿ ಹೆಜ್ಜೆ ಕಾಣಿಸಿಕೊಂಡಿರುವುದು ಜನರನ್ನು ಆತಂಕ್ಕಕೀಡು ಮಾಡಿದೆ.
ಹುಲಿ ಹೆಜ್ಜೆ ಪತ್ತೆಯಾದ ಬಳಿಕ ರೈತರು ತಮ್ಮ ಹೊಲಗದ್ದೆಗಳಿಗೆ ಹೋಗಲು ಹೆದರುತ್ತಿದ್ದಾರೆ. ಹೊಸದಾಗಿ ನಿರ್ಮಾಣವಾಗುತ್ತಿರುವ ಶ್ರೀ ಮಹದೇಶ್ವರ ದೇವಸ್ಥಾನದ ಸುತ್ತಮುತ್ತ ಓಡಾಡಿರುವ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದ್ದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ತಾಲೂಕು ರೈತ ಸಂಘ ಮತ್ತು ಟ್ರ್ಯಾಕ್ಟರ್ ಮಾಲೀಕರ ಸಂಘದ ಅಧ್ಯಕ್ಷ ಮಾದನಹಳ್ಳಿ ಮೂರ್ತಿ ಮಾತನಾಡಿ ಹುಲಿ ಹೆಜ್ಜೆ ಗುರುತು ಸುಮಾರು ಒಂದು ವಾರದಿಂದ ಕಾಣಿಸಿಕೊಂಡಿದ್ದು ಊರಿನ ಜನರು ತಮ್ಮ ಹೊಲಗದ್ದೆ ಮತ್ತು ಇನ್ನಿತರ ಕೆಲಸಗಳಿಗಾಗಿ ಮನೆಯಿಂದ ಹೊರಗೆ ಹೋಗಲು ಹೆದರುತ್ತಿದ್ದಾರೆ.
ಚಿರತೆ ಮತ್ತು ಆನೆಗಳ ಹಾವಳಿ ಈ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು. ರೈತರು ಬೆಳೆದ ಬೆಳೆಗಳನ್ನು ತಿಂದು ಮತ್ತು ಹಾಳು ಮಾಡುತ್ತಿವೆ. ಹುಲಿಯನ್ನು ಒಂದು ತಿಂಗಳ ಹಿಂದೆ ಶೆಟ್ಟಳ್ಳಿ ಎಂಬಲ್ಲಿ ಸಾರ್ವಜನಿಕರಿಗೆ ನೋಡಿದ್ದರು. ಇದೀಗ ಅದು ಕಡಬೂರು, ಶೆಟ್ಟಳ್ಳಿ, ಮಾದನಹಳ್ಳಿ ಮುಂತಾದ ಗ್ರಾಮಗಳ ಜಮೀನುಗಳಲ್ಲಿ ಓಡಾಡಿರುವ ಮಾಹಿತಿಯಿದೆ ಎಂದಿದ್ದಾರೆ.