ಬೆಂಗಳೂರು: ಬೆಂಗಳೂರಿಗೆ ಶಾಶ್ವತ ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆ ಜಾರಿ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ಬೆಂಗಳೂರಿನ ಜಲಮೂಲಗಳನ್ನು ಸಂರಕ್ಷಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ ಒತ್ತಾಯಿಸಿದರು.
ಸೋಮವಾರ ಶಾಂತಿನಗರ ವಿಧಾನಸಭಾ ಕ್ಷೇತ್ರದ ಎಂಜಿ ರಸ್ತೆಯಲ್ಲಿ ಎಎಪಿ ಪತ್ರ ಚಳುವಳಿ ಅಭಿಯಾನ ನಡೆಸಿತು. ಇದೇ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಮೋಹನ್ ದಸಾರಿ ಅವರು, ತಮಿಳುನಾಡು ಸರ್ಕಾರವು ಕಾವೇರಿ ನೀರನ್ನು ಹರಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುವ ನಿರ್ಣಯವನ್ನು ಅಧಿವೇಶನದಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಂಡಿದೆ.
ಆದರೆ ನಮ್ಮ ರಾಜ್ಯದಲ್ಲಿ ಸಂಕಷ್ಟ ಕಾಲದಲ್ಲಿ ನೀರು ಹರಿಸಲು ಸಾಧ್ಯವಿಲ್ಲ ಎಂಬ ನಿರ್ಣಯವನ್ನು ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ತಕ್ಷಣ ಸದನವನ್ನು ಕರೆದು ಬರ ಸಂಕಷ್ಟದಲ್ಲಿ ನೀರು ಹರಿಸಲು ಸಾಧ್ಯವಿಲ್ಲ ಎಂಬ ನಿರ್ಣಯವನ್ನು ಕೈಗೊಳ್ಳಬೇಕು ಎಂದರು.
ಎಂಜಿ ರಸ್ತೆಯ ಚರ್ಚ್ ಸ್ಟ್ರೀಟ್ ಮತ್ತು ಮ್ಯೂಸಿಯಂ ಅಡ್ಡ ರಸ್ತೆಯಲ್ಲಿ ಪಕ್ಷದ ಮುಖಂಡರು ಖುದ್ದಾಗಿ ಕಾರ್ಮಿಕರು, ಆಟೋ ಚಾಲಕರು, ಕಚೇರಿ ಸಿಬ್ಬಂದಿ, ಬಿಬಿಎಂಪಿ ಸಿಬ್ಬಂದಿ ಸೇರಿದಂತೆ ಬೆಂಗಳೂರಿನ ಎಲ್ಲ ವರ್ಗದ ಜನರನ್ನು ಭೇಟಿಯಾಗಿ ಪತ್ರ ಚಳುವಳಿ ನಡೆಸಿದರು. ನಾಗರಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಈ ಸಂದರ್ಭ ಪಕ್ಷದ ಮುಖಂಡರಾದ ಜಗದೀಶ್ ಚಂದ್ರ, ಅನಿಲ್ ನಾಚಪ್ಪ, ವೀಣಾ ಸರಾವ್, ಸುಷ್ಮಾ ವೀರ್, ಮಹಾಲಕ್ಷ್ಮಿ, ಫ್ರಾನ್ಸಿಸ್, ಶಿವಕುಮಾರ್, ಜ್ಯೋತಿ, ಇರ್ಷಾದ್ ಸೇರಿದಂತೆ ಹಲವರು ಇದ್ದರು.