KSRTC: ಪರಿಷ್ಕೃತ ವೇತನ ಹಿಂಬಾಕಿ ಪಾವತಿಗೆ ಆಗ್ರಹಿಸಿ ನಿವೃತ್ತ ನೌಕರರ ಪ್ರತಿಭಟನಾ ಧರಣಿ
ಬೆಂಗಳೂರು: 01.01.2020 ರಿಂದ 28.02.2023 ರವರೆಗೆ ಸೇವೆಯಿಂದ ನಿವೃತ್ತಿ ಹೊಂದಿರುವ ಹಾಗೂ ಇತರೆ ಕಾರಣಗಳಿಂದ ಸೇವಾವಿಮುಕ್ತಿ ಹೊಂದಿರುವ ನೌಕರರಿಗೆ ಪರಿಷ್ಕೃತ ವೇತನ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಅ.19ರ ಗುರುವಾರ ನಿವೃತ್ತ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ನಿವೃತ್ತ ನೌಕರರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹ ಮಾಡುತ್ತಿರುವ ನಿವೃತ್ತ ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರ ಮತ್ತು ಸಾರಿಗೆ ಆಡಳಿತ ಮಂಡಳಿಯನ್ನು ಒತ್ತಾಯಿಸಿದರು.
ರಾಜ್ಯ ಸರ್ಕಾರ 17,03.2023 ರಂದು ಹೊರಡಿಸಿರುವ ಆದೇಶದ ಮೇರೆಗೆ (ಟಿಡಿ 12 ಟಿಸಿಬಿ 2023, ಬೆಂಗಳೂರು ದಿನಾಂಕ 17.03.2023) ತಾವು ಎಲ್ಲ ನೌಕರರಿಗೂ 31.12.2019 ರಂದು ಪಡೆಯುತ್ತಿದ್ದ ಮೂಲ ವೇತನವನ್ನು ಶೇಕಡಾ 15ರಂತೆ ಹೆಚ್ಚಿಸಿ ಅದರಂತೆ ವೇತನ ಶ್ರೇಣಿಗಳನ್ನು ಪರಿಷ್ಕರಿಸಿ 01.03.2023 ರಿಂದ ಜಾರಿಗೊಳಿಸಲು ತಾವು ಆದೇಶ ನೀಡಿರುತ್ತೀರಿ, ಅಂದರೆ ಈ ನಮ್ಮೆಲ್ಲ ನಿವೃತ್ತ ನೌಕರರಿಗೂ ಕಾಲಕಾಲಕ್ಕೆ ಬರುತ್ತಿದ್ದ ವಾರ್ಷಿಕ ವೇತನ ಬಡ್ತಿಯನ್ನು (Increment) ಕೊಟ್ಟು ಸ್ಥಿರೀಕರಣ (Fixation) ಸೌಲಭ್ಯದೊಂದಿಗೆ ಹೊಸ ವೇತನ ಶ್ರೇಣಿಗೆ ತರಬೇಕು ಎಂದು ಆಗ್ರಹಿಸಿದರು.
01.01.2020 ರಿಂದ 28,02,2023 ರವರೆಗೆ ಹಲವಾರು ನೌಕರರು ನಾಲ್ಕೂ ರಾಜ್ಯ ಸಾರಿಗೆ ನಿಗಮಗಳಲ್ಲೂ ನಿವೃತ್ತಿ ಹೊಂದಿದ್ದಾರೆ. ಕೆಲವರು ಮೃತರಾಗಿದ್ದಾರೆ. ಇನ್ನು ಕೆಲವರೂ ಸ್ವಯಂ ನಿವೃತ್ತಿ ಹೊಂದಿರುತ್ತಾರೆ. ಹಾಗೂ ಕೆಲವರು ರಾಜೀನಾಮೆ ಕೊಟ್ಟಿರುತ್ತಾರೆ. ಈ ಎಲ್ಲ ನೌಕರರಿಗೂ ಪರಿಷ್ಕೃತ ವೇತನ ಶ್ರೇಣಿಯನ್ವಯ ವೇತನ ಪರಿಷ್ಕರಣೆ ಮಾಡುವ ಮೂಲಕ ವೇತನ ಕೊಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಇನ್ನು ಈ ಹಿಂದೆ ಸಾರಿಗೆ ನಿಗಮದಲ್ಲಿ ವೇತನ ಹೆಚ್ಚಳವಾದಾಗ ಈ ಎಲ್ಲ ವರ್ಗದ ನೌಕರರಿಗೂ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ನಿಗದಿ ಮಾಡಲಾಗುತ್ತಿತ್ತು. ಇದರಿಂದ ಅಂತಹ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ದೊರಕುವ ವೇತನ ಹೆಚ್ಚಳ, ಅರಿಯರ್ಸ್ ಬಾಕಿ, ನಿವೃತ್ತಿಯ ಎಲ್ಲ ಸೌಲಭ್ಯಗಳು ದೊರೆಯುತ್ತಿತ್ತು. ಈಗ ಕೇಂದ್ರ ಕಚೇರಿಯು ಸುತ್ತೋಲೆ ಸಂಖ್ಯೆ 16/2023 ದಿನಾಂಕ 28.03.2023 ರಂದು ಹೊರಡಿಸಿರುವ ಆದೇಶದಲ್ಲಿ ಈ ಅಂಶಗಳು ಕಂಡುಬರದೆ ಇರುವುದರಿಂದ ಸಹಸ್ರಾರು ನೌಕರರು ವೇತನ ಪರಿಷ್ಕರಣೆಯ ಸೌಲಭ್ಯದಿಂದ ವಂಚಿತರಾಗುತ್ತಿದ್ದೇವೆ ಎಂದು ವಿವರಿಸಿದರು.
ನಮಗೂ ಹೊಸ ಶ್ರೇಣಿಗಳಲ್ಲಿ 01.01.2020 ರಿಂದ ವೇತನ ಪರಿಷ್ಕರಿಸಿದರೆ ನಮಗೆ ಬರಬೇಕಾದ ಗ್ರಾಚ್ಯುಟಿ ಹೆಚ್ಚಳ, ರಜಾ ನಗದೀಕರಣ ಹೆಚ್ಚಳದ ಇತ್ಯಾದಿ ಆರ್ಥಿಕ ಸೌಲಭ್ಯಗಳ ವ್ಯತ್ಯಾಸದ ಮೊತ್ತ ಬರುತ್ತದೆ. ಆದರೆ ಈವರೆಗೂ ನಿಗಮಗಳಾಗಲಿ ಸರ್ಕಾರವಾಗಲೀ ಯಾವುದೇ ತೀರ್ಮಾನ ತೆಗೆದುಕೊಂಡಿ. ಕಾರಣ ನಾವು ಇಂದು ಒಂದು ದಿನದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದೇವೆ. ಈಗಲೂ ತಾವು ತೀರ್ಮಾನ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಬೇಕಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.
ಸಾರಿಗೆ ನಿವೃತ್ತ ನೌಕರರ ಧರಣಿಯಲ್ಲಿ ನೌಕರರ ಪರ ಸಂಘಟನೆಗಳು ಪದಾಧಿಕಾರಿಗಳು, ನಿಗಮದ ಸಿಬ್ಬಂದಿ ಸೇರಿದಂತೆ ನೂರಾರು ಮಂದಿ ನಿವೃತ್ತ ನೌಕರರು ಭಾಗವಹಿಸಿದ್ದಾರೆ.