ಬೆಂಗಳೂರು: 01.01.2020 ರಿಂದ 28.02.2023 ರವರೆಗೆ ಸೇವೆಯಿಂದ ನಿವೃತ್ತಿ ಹೊಂದಿರುವ ಹಾಗೂ ಇತರೆ ಕಾರಣಗಳಿಂದ ಸೇವಾವಿಮುಕ್ತಿ ಹೊಂದಿರುವ ನೌಕರರಿಗೆ ಪರಿಷ್ಕೃತ ವೇತನ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಇದೇ ಅ.19ರಂದು ಪ್ರತಿಭಟನೆ ನಡೆಸಲಾಯಿತು. ಆದರೂ ಈವರೆಗೂ ಸರ್ಕಾರವಾಗಲಿ ಅಥವಾ ನಿಗಮಗಳ ಆಡಳಿತ ಮಂಡಳಿಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿವೃತ್ತ ನೌಕರರು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ 17,03.2023 ರಂದು ಹೊರಡಿಸಿರುವ ಆದೇಶದ ಮೇರೆಗೆ (ಟಿಡಿ 12 ಟಿಸಿಬಿ 2023, ಬೆಂಗಳೂರು ದಿನಾಂಕ 17.03.2023) ತಾವು ಎಲ್ಲ ನೌಕರರಿಗೂ 31.12.2019 ರಂದು ಪಡೆಯುತ್ತಿದ್ದ ಮೂಲ ವೇತನವನ್ನು ಶೇಕಡಾ 15ರಂತೆ ಹೆಚ್ಚಿಸಿ ಅದರಂತೆ ವೇತನ ಶ್ರೇಣಿಗಳನ್ನು ಪರಿಷ್ಕರಿಸಿ 01.03.2023 ರಿಂದ ಜಾರಿಗೊಳಿಸಲು ಕೆಎಸ್‌ಆರ್‌ಟಿಸಿ ಎಂಡಿ ಅವರು ಆದೇಶ ಹೊರಡಿಸಿದ್ದಾರೆ. ಈ ಎಲ್ಲ ನೌಕರರಿಗೂ ಕಾಲಕಾಲಕ್ಕೆ ಬರುತ್ತಿದ್ದ ವಾರ್ಷಿಕ ವೇತನ ಬಡ್ತಿಯನ್ನು (Increment) ಕೊಟ್ಟು ಸ್ಥಿರೀಕರಣ (Fixation) ಸೌಲಭ್ಯದೊಂದಿಗೆ ಹೊಸ ವೇತನ ಶ್ರೇಣಿಗೆ ತಂದಿದ್ದಾರೆ.
ಆದರೆ, 01.01.2020 ರಿಂದ 28,02,2023 ರವರೆಗೆ ಹಲವಾರು ನೌಕರರು ನಾಲ್ಕೂ ರಾಜ್ಯ ಸಾರಿಗೆ ನಿಗಮಗಳಲ್ಲೂ ನಿವೃತ್ತಿ ಹೊಂದಿದ್ದಾರೆ. ಕೆಲವರು ಮೃತರಾಗಿದ್ದಾರೆ. ಇನ್ನು ಕೆಲವರೂ ಸ್ವಯಂ ನಿವೃತ್ತಿ ಹೊಂದಿದ್ದಾರೆ. ಕೆಲವರು ರಾಜೀನಾಮೆ ಕೊಟ್ಟಿದ್ದಾರೆ. ಈ ಎಲ್ಲ ನೌಕರರಿಗೂ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪರಿಷ್ಕರಣೆ ಆಗಿಲ್ಲ. ಮಾಡುತ್ತೇವೆ ಎಂದೇ ನಿಗಮಗಳ ಆಡಳಿತ ಮಂಡಳಿ ಸಬೂಬು ಹೇಳಿಕೊಂಡು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಹಿಂದೆ ಸಾರಿಗೆ ನಿಗಮದಲ್ಲಿ ವೇತನ ಹೆಚ್ಚಳವಾದಾಗ ಈ ಎಲ್ಲ ವರ್ಗದ ನೌಕರರಿಗೂ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ನಿಗದಿ ಮಾಡಲಾಗುತ್ತಿತ್ತು. ಇದರಿಂದ ಪರಿಷ್ಕೃತ ವೇತನ ಶ್ರೇಣಿಯಲ್ಲಿ ದೊರಕುವ ವೇತನ ಹೆಚ್ಚಳ, ಅರಿಯರ್ಸ್ ಬಾಕಿ, ನಿವೃತ್ತಿಯ ಎಲ್ಲ ಸೌಲಭ್ಯಗಳು ದೊರೆಯುತ್ತಿದ್ದವು. ಆದರೆ, ಈ ಬಾರಿ ಕೊರೊನಾ ನೆಪಹೇಳಿ ನಮಗೆ ವಂಚನೆ ಮಾಡಲಾಗುತ್ತಿದೆ ಎಂದು ನಿವೃತ್ತ ನೌಕರರು ಆರೋಪ ಮಾಡುತ್ತಿದ್ದಾರೆ.
ಇದಕ್ಕೆ ತಾಜಾ ನಿದರ್ಶನ ಎಂಬಂತೆ ಕೇಂದ್ರ ಕಚೇರಿಯು ಸುತ್ತೋಲೆ ಸಂಖ್ಯೆ 16/2023 ದಿನಾಂಕ 28.03.2023 ರಂದು ಹೊರಡಿಸಿರುವ ಆದೇಶದಲ್ಲಿ ಈ ಅಂಶಗಳು ಕಂಡುಬರದೆ ಇರುವುದರಿಂದ ಸಹಸ್ರಾರು ನೌಕರರು ವೇತನ ಪರಿಷ್ಕರಣೆಯ ಸೌಲಭ್ಯದಿಂದ ವಂಚಿತರಾಗಿದ್ದಾರೆ. ನಮಗೆ ಹೊಸ ಶ್ರೇಣಿಗಳಲ್ಲಿ 01.01.2020 ರಿಂದ ವೇತನ ಪರಿಷ್ಕರಿಸಿದರೆ ಬರಬೇಕಾದ ಗ್ರಾಚ್ಯುಟಿ ಹೆಚ್ಚಳ, ರಜಾ ನಗದೀಕರಣ ಹೆಚ್ಚಳದ ಇತ್ಯಾದಿ ಆರ್ಥಿಕ ಸೌಲಭ್ಯಗಳ ವ್ಯತ್ಯಾಸದ ಮೊತ್ತ ಬರುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಸಾರಿಗೆ ನಿಗಮಗಳ ನೌಕರರಿಗೆ ಮಾತ್ರ ಈ ರೀತಿಯ ತಾರತಮ್ಯತೆ ಮಾಡಲಾಗುತ್ತಿದೆ. ಕೊರೊನಾ ವೇಳೆ ಜನಪ್ರತಿನಿಧಿಗಳು ತಮ್ಮ ವೇತನವನ್ನು ಎಷ್ಟು ತಿಂಗಳು ಬಿಟ್ಟುಕೊಟ್ಟಿದ್ದಾರೆ. ಅವರೂ ಕೂಡ 24 ತಿಂಗಳ ವೇತನ ಇತರ ಭತ್ಯೆಗಳನ್ನು ಬಿಟ್ಟುಕೊಟ್ಟಿದ್ದಾರ? ಆದರೆ ಸಾರಿಗೆ ನಿಗಮಗಳ ನೌಕರರಿಗೆ ಮಾತ್ರ ಬಿಟ್ಟುಕೊಡಿ ಎಂದೂ ಹೇಳದಯೇ ವೇತನ ಹೆಚ್ಚಳ ಅರಿಯರ್ಸ್‌ಅನ್ನು ಕೊಡದೆ ವಂಚನೆ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.
ಸರ್ಕಾರ ಮತ್ತು ಸಾರಿಗೆ ನಿಗಮಗಳ ಆಡಳಿತ ಮಂಡಳಿಗಳು ಕೂಡಲೇ ನಮಗೆ ಬರಬೇಕಿರುವ ವೇತನ ಹೆಚ್ಚಳದ ಹಿಂಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಅದೂ ಕೂಡ ಒಂದೇ ಕಂತಿನಲ್ಲಿ ಪಾವತಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಆದರೆ, ಸರ್ಕಾರವಾಗಲೀ ಅಥವಾ ಆಡಳಿತ ಮಂಡಳಿಯಾಗಲೀ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ನಿವೃತ್ತ ನೌಕರರನ್ನು ವಂಚಿಸಿಕೊಂಡೇ ಬರುತ್ತಿದೆ. ಕೇಳಿದರೆ ನಿಗಮದಲ್ಲಿ ಹಣವಿಲ್ಲ ಎಂಬುದನ್ನು ಬಾಯಿಪಾಠ ಮಾಡಿಕೊಂಡಂತೆ ಮತ್ತೆ ಮತ್ತೆ ಹೇಳುತ್ತಲೇ ಇರುತ್ತದೆ. ಇನ್ನಾದರೂ ಈ ರೀತಿಯ ಸಬೂಬು ಹೇಳದೆ ಕಷ್ಟಪಟ್ಟು ದುಡಿದ ಹಣವನ್ನು ನೌಕರರಿಗೆ ತಲುಪಿಸುವತ್ತ ಕ್ರಮ ಕೈಗೊಳ್ಳಬೇಕು ಎಂದು ನೌಕರರ ಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.