NEWSನಮ್ಮಜಿಲ್ಲೆ

ಕೊರೊನಾ ಮಹಾಮಾರಿ ಹೊಡೆದೋಡಿಸಲು ಹೊಣೆಹೊತ್ತ ಶ್ರೀನಗರ ಜನತೆ

ತುಮೂರಿನಲ್ಲಿ ಸ್ವಯಂಪ್ರೇರಿತವಾಗಿ ನಾಗರಿಕ ಸಮಿತಿಯಿಂದ ವಿವಿಧ ನಿಯಮಗಳು ಜಾರಿ

ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಕೊರೊನಾ ವೈರಸ್(ಕೋವಿಡ್-19)ನಿಂದ ದೇಶ-ವಿದೇಶಗಳಲ್ಲಿ ಭಯಂಕರ ಸಾವು-ನೋವುಗಳು ಸಂಭವಿಸುತ್ತಿರುವುದರಿಂದ   ತುಮಕೂರು ನಗರದ ಶ್ರೀನಗರ-ಬಂಡೇಪಾಳ್ಯ ಬಡಾವಣೆಯ ನಾಗರಿಕರೆಲ್ಲ ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕರೋನ ವೈರಸ್ ಅನ್ನು ಹೊಡೆದೋಡಿಸುವ ಪಣ ತೊಟ್ಟಿದ್ದಾರೆ.

ಸುತ್ತೆಲ್ಲ ದೇಶಗಳಲ್ಲಿ ಮಹಾಮಾರಿ ಕೋವಿಡ್-19 ವೈರಾಣು ತನ್ನ ಕಬಂಧ ಬಾಹುಗಳಿಂದ   ಅಸಂಖ್ಯಾತ ಜನರ ಜೀವವನ್ನು ಬಲಿತೆಗೆದುಕೊಳ್ಳುತ್ತಿರುವುದನ್ನು ಕಂಡು ಎಚ್ಚೆತ್ತ ಶ್ರೀನಗರ   ನಾಗರೀಕ ಕ್ಷೇಮಾಭಿವೃದ್ಧಿ ಸಮಿತಿಯು ಸ್ಥಳೀಯ ನಾಗರಿಕರೊಂದಿಗೆ ಸಮಾಲೋಚಿಸಿ   ಕೆಲವು ನಿರ್ಧಾರಗಳನ್ನು ಕೈಗೊಂಡು ಕಾರ್ಯೋನ್ಮುಖವಾಗಿದೆ.  ಮುಖ್ಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರಿಂದ ಈ ಮಹಾಮಾರಿ ರೋಗವನ್ನು ತೊಲಗಿಸಬಹುದೆಂದು ಸ್ಥಳೀಯರೆಲ್ಲ   ತಮಗೆ ತಾವೇ ನಿರ್ಬಂಧಗಳನ್ನು ಹಾಕಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.

ನಾಳೆ ಬನ್ನಿ: ಕೊರೊನಾ ವೈರಸ್‌ನಿಂದ ಪಾರಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳವುದೇ ಉತ್ತಮ ಮಾರ್ಗೋಪಾಯವೆಂದು ಮಾನ್ಯ ಪ್ರಧಾನಿಗಳು ಮಾರ್ಚ್ ೨೪ರ ಮಧ್ಯರಾತ್ರಿಯಿಂದ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಎಷ್ಟೇ ಹತ್ತಿರದ ಸಂಬಂಧಿಕರಾಗಲೀ, ಆಪ್ತ ಸ್ನೇಹಿತರಾಗಲೀ   ಮನೆಗೆ ಬರದ ಹಾಗೆ ಶ್ರೀನಗರ ಬಡಾವಣೆಯ ಪ್ರತೀ ಮನೆಯ ಮುಂದೆ ನಾಳೆ ಬನ್ನಿ  ಎಂಬ ಭಿತ್ತಿ ಪತ್ರವನ್ನು ಅಂಟಿಸಲಾಗಿದೆಯಲ್ಲದೆ  ಅಕ್ಕ-ಪಕ್ಕದ ಮನೆಯವರಿಗೂ ಸಹ ತಮ್ಮ ಮನೆಯೊಳಗೆ ಪ್ರವೇಶವನ್ನು ನಿಷೇಧಿಸಿದ್ದಾರೆ.

ಸರದಿಯನುಸಾರ ಅಗತ್ಯ ಸಾಮಗ್ರಿ ತರಲು ಅವಕಾಶ

ಈ ಬಡಾವಣೆಯಲ್ಲಿ ೮೦೦ ಮನೆಗಳಿದ್ದು,  ಇದನ್ನು 20 ಭಾಗಗಳಾಗಿ ವಿಂಗಡಿಸಿ ಕೇವಲ 40(5%)  ಮನೆಗಳ ಸದಸ್ಯರು ಸರದಿಯಂತೆ   2 ಗಂಟೆಗಳ ಕಾಲ ಹೊರ ಹೋಗಿ ದಿನಸಿ, ಹಣ್ಣು, ತರಕಾರಿ ತರಲು ಅವಕಾಶ ಮಾಡಿಕೊಡಲಾಗಿದೆ.   ಮೂರು ದಿನಗಳ ನಂತರ ಇವರಿಗೆ ಮತ್ತೊಮ್ಮೆ ತಮ್ಮ ಸರದಿ ಬರುತ್ತದೆ.  ಸರದಿ ಬರುವವರೆಗೂ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರುವಂತಿಲ್ಲ.  ಈ ೪೦ ಮನೆಯವರು ಹೊರಗಡೆ ಇದ್ದಾಗ ಉಳಿದ 760(95%) ಮನೆಗಳ ಸದಸ್ಯರು ಮನೆಯೊಳಗೆ ಇರತಕ್ಕದ್ದು.  ಒಂದು ಬ್ಯಾಚ್ ಹಾಗೂ ಮತ್ತೊಂದು ಬ್ಯಾಚ್ ಮಧ್ಯೆ ಒಮ್ಮೆ ದಿನಸಿ ಅಂಗಡಿಯ ಆವರಣವನ್ನು ಶುಚಿಗೊಳಿಸಬೇಕೆಂಬ ಷರತ್ತನ್ನು ಬಡಾವಣೆ ಜನರು ತಮಗೆ ತಾವೇ ಹಾಕಿಕೊಂಡಿದ್ದಾರೆ.

ಸ್ವಯಂ ಸೇವಕರ ನೇಮಕ: ಪ್ರತಿ 2 ಬೀದಿಗೆ ಸ್ವಯಂ ಸೇವಕ(ಯುವಕರು)ರನ್ನು ನೇಮಿಸಲಾಗಿದ್ದು, ನಾಗರಿಕರು ತಮ್ಮ ಅಗತ್ಯತೆಯನ್ನು ಸ್ವಯಂ ಸೇವಕರ ಮುಖೇನ ಪೂರೈಸಿಕೊಳ್ಳುತ್ತಿದ್ದಾರೆ. ಬಡಾವಣೆಯಲ್ಲಿರುವ 4 ದಿನಸಿ ಅಂಗಡಿ, 1 ಮೆಡಿಕಲ್ ಸ್ಟೋರ್‌ನವರನ್ನು ಹೊರತುಪಡಿಸಿ ಉಳಿದಂತೆ ಯಾವ ನಾಗರಿಕರು   ಬಡಾವಣೆಯಿಂದ ಹೊರ ಹೋಗುತ್ತಿಲ್ಲ.   ಹಿರಿಯ ನಾಗರಿಕರು ಇರುವ ಮನೆಗಳಿಗೆ ಮಾತ್ರ 20 ದಿವಸದ ಪೂರ್ತಿ ಸರಬರಾಜಿನ ಜವಾಬ್ದಾರಿಯನ್ನು ಸ್ವಯಂ ಸೇವಕರೇ ನಿರ್ವಹಿಸುತ್ತಾರೆ.  ಪ್ರತಿ ಬೀದಿಗೆ ಒಂದರಂತೆ ವಾಟ್ಸ್‌ಪ್ ಗ್ರೂಪ್‌ನ್ನು ರಚಿಸಲಾಗಿದ್ದು, ವಾಟ್ಸ್‌ಪ್ ಮೂಲಕ ತಮಗೆ ಬೇಕಾದ ಸಾಮಗ್ರಿಯ ಬಗ್ಗೆ ಒಂದು ದಿನ ಮುಂಚೆಯೇ ತಿಳಿಸಿ ಅಂಗಡಿಗಳಿಂದ ತರಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ.

ಸಿದ್ದಗಂಗಾ ಶ್ರೀಗಳ ಮೆಚ್ಚುಗೆ: ಕೊರೊನಾ ವೈರಸ್ ರೋಗವನ್ನು ದೂರವಿಡಲು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಶ್ರೀನಗರ-ಬಂಡೇಪಾಳ್ಯ ಬಡಾವಣೆಯ ಜನತೆ ತಮಗೆ ತಾವೇ ಹಾಕಿಕೊಂಡಿರುವ ಈ ನಿರ್ಬಂಧಗಳು ನಿಜವಾಗಿಯೂ ಇತರರಿಗೆ ಮಾದರಿ ಹಾಗೂ ಶ್ಲಾಘನೀಯವಾದುದು ಎಂದು  ಸಿದ್ದಗಂಗಾ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ವಯಂ ಸೇವಕರಾಗಿ ಮಹೇಶ್, ಹರೀಶ್, ರೇಣುಕ, ಚೇತನ್, ನಾಗೇಶ್, ನಾರಾಯಣಗೌಡ ಸೇರಿದಂತೆ ೪೦ ಯುವಕರು ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  ಇದೇ ಬಡಾವಣೆಯ ಸಿಎಫ್‌ಟಿಆರ್‌ಐ.ನ ಬಯೋಟೆಕ್ನಾಲಜಿ ಇಂಜಿನಿಯರ್ ಮತ್ತು ರೀಸರ್ಚರ್ ಆರ್.ವಿ. ಮಹೇಶ್ ಅವರ ಸಲಹೆ ಸೂಚನೆಯನ್ವಯ ಈ ಮಹತ್ವದ ಮುಂದಡಿಯನ್ನು ಇಡಲಾಗಿದೆ ಎಂದು ಶ್ರೀನಗರ ನಾಗರಿಕ ಕ್ಷೇಮಾಭಿವೃದ್ಧಿ ಸಮಿತಿ ತಿಳಿಸಿದೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ