ಬಾಗಲಕೋಟೆ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಮಾಡಲಾಗಿದ್ದು, ನಿಯಮ ಉಲ್ಲಂಘಿಸಿ ಅಸಹಕಾರ ಮಾಡಿದವರ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲಾಗುವುದೆಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಮೂರನೇ ಹಂತದಲ್ಲಿದೆ. ಸೋಂಕು ಹರಡುವದನ್ನು ತಡೆಗಟ್ಟಲು ಮನೆಯಲ್ಲಿರುವುದೊಂದೆ ಮಾರ್ಗವಾಗಿದೆ. ಆದ್ದರಿಂದ ಸಾರ್ವಜನಿಕರು ಮನೆಯಿಂದ ಹೊರಗೆ ಬರದೇ ಜನ ಜಂಗುಳಿಯಿಂದ ದೂರವಿರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅನಗತ್ಯವಾಗಿ ತಿರುಗಾಡಬಾರದು. ನಿಮಯ ಉಲ್ಲಂಘಿಸಿದಲ್ಲಿ ಕಠಿಣ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು.
ಕೋವಿಡ್-19 ಭೀತಿ ಮಾನವ ಕುಲಕ್ಕೆ ಪಿಡುಗಾಗಿ ಪರಿಣಮಿಸಿದ್ದು, ಇದನ್ನು ತಡೆಗಟ್ಟಲು ಅನಗತ್ಯವಾಗಿ ಮನೆಯಿಂದ ಹೊರಗೆ ಬರುವದನ್ನು ನಿಲ್ಲಿಸಬೇಕು. ಸಾರ್ವಜನಿಕರಿಗೆ ಬೇಕಾದ ಅಗತ್ಯ ವಸ್ತುಗಳ ಪೂರೈಕೆ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ. ಅಗತ್ಯ ದಿನಬಳಕೆಯ ವಸ್ತುಗಳನ್ನು ಮಾತ್ರ ಸಾಗಾಣಿಕೆ ಮಾಡುವಂತೆ ಸರಕು ಸಾಗಾಣಿಕೆ ಮಾಲಿಕರಿಗೆ ಸೂಚಿಸಲಾಗಿದೆ. ಅಲ್ಲದೇ ಅವಶ್ಯಕ ವಸ್ತುಗಳ ಸಾಗಾಣಿಕೆ ವಾಹನಗಳಿಗೆ ಹಾಗೂ ಕಾರ್ಯನಿರತ ಅನುಮತಿ ನೀಡಿದ ವಾಹನಗಳಿಗೆ ಮಾತ್ರ ಇಂಧನ ಪೂರೈಸುವಂತೆ ಪೆಟ್ರೋಲ್ ಬಂಕ್ ಮಾಲಿಕರಿಗೆ ಆದೇಶಿಸಲಾಗಿದೆ ಎಂದು ತಿಳಿಸಲಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ 165 ಜನ ಹೋಮ್ ಕ್ವಾರಂಟೈನ್ನಲ್ಲಿದ್ದು, ಅವರೆಲ್ಲರಿಗಳೂ ಅವಧಿಯ ಮುದ್ರಯನ್ನು ಹಾಕಲಾಗಿದೆ. ಅವರ ಹೋಮ್ ಕ್ವಾರಂಟೈನ್ ಅವಧಿಯನ್ನು 14 ದಿನಗಳ ವರೆಗೆ ವಿಸ್ತರಿಸಲಾಗಿದೆ. ಜಿಲ್ಲೆಯಲ್ಲಿ 10 ವ್ಯಕ್ತಿಗಳ ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸಲಾಗಿದ್ದು, ಎಲ್ಲ ವರದಿಗಳು ನೆಗೆಟಿವ್ ಬಂದಿರುತ್ತವೆ. ಜಿಲ್ಲೆಯಲ್ಲಿ 14 ಫೀವರ್ ಕ್ಲಿನಿಕ್ ತೆರೆಯಲಾಗಿದೆ. 3 ತಾತ್ಕಾಲಿಕ ಹಾಸ್ಟೇಲ್ಗಳಲ್ಲಿ ಎಸ್ಐಸಿ ತೆರೆಯಲು ಕ್ರಮಕೈಗೊಳ್ಳಲಾಗಿದೆ. ಅಗತ್ಯವಿರುವ ವೆಂಟಿಲೇಟರ್ಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ 3 ವೈದ್ಯಕೀಯ ಕಾಲೇಜಿನಲ್ಲಿ 5 ಹಾಗೂ ಕೆರೂಡಿ ಆಸ್ಪತ್ರೆಯಲ್ಲಿ 2 ಮತ್ತು ಆಯಾ ತಾಲೂಕಾ ಆಸ್ಪತ್ರೆಗಳಲ್ಲಿ ತಲಾ ಒಂದರಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರ ಏಪ್ರೀಲ್ ಮತ್ತು ಮೇ ಮಾಹೆಯ ಪಡಿತರವನ್ನು ಒಟ್ಟಿಗೆ ನೀಡಲು ಮುಂದಾಗಿದ್ದು, ಏಪ್ರೀಲ್ ಮೊದಲ ವಾರದಲ್ಲಿಯೇ ಪಡಿತರ ಚೀಟಿದಾರರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ವಿತರಿಸಲಾಗುವುದು. ಜಿಲ್ಲೆಯಲ್ಲಿ ಈಗಾಗಲೇ 1.57 ಲಕ್ಷ ಕ್ವಿಂಟಲ್ ಅಕ್ಕಿ, 14,657 ಕ್ವಿಂಟಲ್ ಗೋದಿ ಸ್ಟಾಕ್ ಇರುವುದಾಗಿ ತಿಳಿಸಿದರು. ಪ್ರತಿ ಅಂತ್ಯೋದಯ ಕಾರ್ಡದಾರರಿಗೆ 70 ಕೆಜಿ ಅಕ್ಕಿ, ಬಿಪಿಎಲ್ ಪ್ರತಿ ಯುನಿಟ್ಗೆ 10 ಕೆಜಿ ಅಕ್ಕಿ, 4 ಕೆಜಿ ಗೋದಿ ಉಚಿತವಾಗಿ ವಿತರಿಸಲಾಗುತ್ತಿದೆ. ಎಪಿಎಲ್ ಕಾರ್ಡದಾರರಿಗೆ ಏಕ ಸದಸ್ಯರಿಗೆ 10 ಕೆಜಿ ಹಾಗೂ ಹೆಚ್ಚಿನ ಸದಸ್ಯರಿರುವ ಪಡಿತರ ಚೀಟಿದಾರರಿಗೆ 20 ಕೆಜಿ ಅಕ್ಕಿಯನ್ನು ಪ್ರತಿ ಕೆಜಿ 15 ರೂ.ಗಳಂತೆ ವಿತರಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಹೋಮ್ ಕ್ವಾರಂಟೈನ್ಲ್ಲಿರುವವರ ಮನೆಗಳಿಗೆ ಜನ ಭೇಟಿ ನೀಡದಂತೆ ಅವರ ಮನೆ ಬಾಗಿಲಿಗೆ ಅಂಟಿಸಲು ತಯಾರಿಸಲಾದ ಪೋಸ್ಟರ್ಗಳನ್ನು ಉಪ ಮುಖ್ಯಮಂತ್ರಿ ಬಿಡುಗಡೆ ಮಾಡಿದರು.
ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಇತರರು ಇದ್ದರು.