ಬಳ್ಳಾರಿ: ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆಮಾಡಿದ ನಾಲ್ವರಲ್ಲಿ ಇಬ್ಬರನ್ನು ಬಂಧಿಸಿ, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೋವಿಡ್-19 ಸೊಂಕು ವ್ಯಾಪಿಸಬಾರದು ಮತ್ತು ಸಾಮಾಜಿಕ ಅಂತರ ಪರಿಪಾಲಿಸಿ ಸೋಂಕಿನ ಸರಪಳಿಗೆ ಇತಿಶ್ರೀ ಹಾಡಬೇಕು ಎಂಬ ಸದುದ್ದೇಶದಿಂದ ಸರಕಾರ ಜಾರಿಗೆ ತಂದ 144 ಸೆಕ್ಷನ್ ನ ಸಂಪೂರ್ಣ ಉಲ್ಲಂಘನೆಯಾಗಿದ್ದು,ಸ್ಥಳಕ್ಕೆ ಸಾಮಾಜಿಕ ಅಂತರ ಪಾಲಿಸುವ ಲಾಕ್ ಡೌನ್ ಉದ್ದೇಶ ವಿವರಿಸಲು ಬಂದ ಪೊಲೀಸರಿಬ್ಬರ ಮೇಲೆಯೇ ಹಲ್ಲೆ ಮಾಡಿ ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಘಟನೆ ಸಂಡೂರು ತಾಲೂಕಿನ ತಾರಾನಗರದಲ್ಲಿ ಭಾನುವಾರ ನಡೆದಿದೆ.
144ಸೆಕ್ಷನ್ ಉಲ್ಲಂಘನೆ ಹಾಗೂ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆಧಾರದ ಮೇರೆಗೆ ನಾಲ್ವರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಇದರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಪಂ ಸದಸ್ಯ ಮಂಜುನಾಥ ಹಾಗೂ ಅಲ್ತಾಫ್ ಎಂಬುವರೆ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ನಿಂಗಪ್ಪ,ಗಣೇಶ ಅವರನ್ನು ಕೂಡ ಶೀಘ್ರವಾಗಿ ಬಂಧಿಸಲಾಗುವುದು. ಇವರ ವಿರುದ್ಧ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಸಿ.ಕೆ.ಬಾಬಾ ವಿವರಿಸಿದ್ದಾರೆ.
27 ಚೆಕ್ ಪೋಸ್ಟ್ ಗಳಲ್ಲಿ 117 ವಾಹನಗಳು ವಶ
ಲಾಕ್ ಡೌನ್ ಆದೇಶ ಉಲ್ಲಂಘಿಸಿ ಸುಖಾಸುಮ್ಮನೆ ಅನಾವಶ್ಯಕವಾಗಿ ತಿರುಗಾಡುತ್ತಿದ್ದ 117 ವಾಹನಗಳು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಎಸ್ಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಸಂತೆ, ಜಾತ್ರೆ, ಜನರು ಗುಂಪು ಸೇರುವಿಕೆಯನ್ನು ನಿಷೇಧಿಸಲಾಗಿದ್ದರೂ ಸಹ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗೊಲ್ಲರಹಳ್ಳಿಯಲ್ಲಿ ಹತ್ತರಿಂದ ಹದಿನೈದು ಜನ ಕೂಡಿಕೊಂಡು ಕಾಳಿಕಾದೇವಿ ರಥೋತ್ಸವ ಮಾಡಲಾಗಿದೆ. ಜಿಲ್ಲಾ ದಂಡಾಧಿಕಾರಿಗಳ ಆದೇಶದ ಉಲ್ಲಂಘಿಸಿದಕ್ಕೆ ಸೆಕ್ಷನ್ 188ರ ಅನ್ವಯ ಕ್ರಮಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಅಂತರ ರಾಜ್ಯ ಮತ್ತು ಅಂತರ ಜಿಲ್ಲಾ 27 ಚೆಕ್ ಪೋಸ್ಟ್ ಗಳು ಕಾರ್ಯಚರಿಸಲಾಗುತ್ತಿದ್ದು, ಈ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸ್, ಆರೋಗ್ಯ ಮತ್ತು ಕಂದಾಯ ಇಲಾಖೆ ಸಿಬ್ಬಂದಿ 24 ಗಂಟೆ ಕಾರ್ಯನಿರ್ವಸುತ್ತಿವೆ ಎಂದರು.
ಕೊರೊನಾ ವೈರಸ್ ಅರಿವು ಮೂಡಿಸುವ ದಿಸೆಯಲ್ಲಿ ಜಿಲ್ಲಾ ಪೊಲೀಸ್ ವಿಡಿಯೋವೊಂದನ್ನು ಸಿದ್ದಪಡಿಸಿದೆ. ಇದರಲ್ಲಿರುವ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.