ಚಾಮರಾಜನಗರ: ಚಿರತೆಯೊಂದನ್ನು ನಾಡ ಬಂದೂಕಿನಿಂದ ಬೇಟೆಯಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಚಾಮರಾಜನಗರ ಜಿಲ್ಲೆಯ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಶಾಂತರಾಜು, ಅರುಣ್ ಬಂಧಿತರು. ಮತ್ತೊಬ್ಬ ಆರೋಪಿ ನಟರಾಜ್ ತಲೆ ಮರೆಸಿಕೊಂಡಿದ್ದು ಆತನ ಬಂಧನಕ್ಕಾಗಿ ಬಲೆ ಬೀಸಲಾಗಿದೆ.
ಬಂಧಿತ ಆರೋಪಿಗಳನ್ನು ವಿಚಾರಣೆಗೊಳಪಡಿಸಿದ ಸಂದರ್ಭ ಕಾಡಿಗೆ ಅತಿಕ್ರಮ ಪ್ರವೇಶಿಸಿ ಆಗಾಗ್ಗೆ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು ಎಂಬ ವಿಷಯ ಗೊತ್ತಾಗಿದೆ. ಅಲ್ಲದೆ ಉಗುರುಗಳಿಗಾಗಿ ಚಿರತೆಯನ್ನು ನಾಲ್ಕು ದಿನಗಳ ಹಿಂದೆ ಬೇಟೆಯಾಡಿದ್ದರು ಎಂದು ತಿಳಿದುಬಂದಿದೆ.
ಕಳ್ಳಬೇಟೆಗಾರರ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸರು ನಾಲ್ಕು ತಂಡಗಳನ್ನು ಮಾಡಿಕೊಂಡು ತಾಲ್ಲೂಕಿನ ಮಧುವನಹಳ್ಳಿ, ಚಿಕ್ಕಲ್ಲೂರು, ಕೊತ್ತನೂರು ಮಾರ್ಗಗಳಲ್ಲಿ ಗಸ್ತಿನಲ್ಲಿದ್ದರು. ಈ ವೇಳೆ ಬೆಳಗಿನ ಜಾವ 5 ಗಂಟೆ ಸುಮಾರಿಗೆ ದೊಡ್ಡಿಂದುವಾಡಿ ನಾಲೆ ರಸ್ತೆಯಲ್ಲಿ ಕಾಯುತ್ತಿದ್ದ ವೇಳೆ, ಬೈಕ್ ವೊಂದರಲ್ಲಿ ಇಬ್ಬರು ಬರುತ್ತಿದ್ದರು. ಪೊಲೀಸರು ಅವರನ್ನು ತಡೆದು ಪರಿಶೀಲಿಸಿದಾಗ, ಅವರ ಬಳಿಯಲ್ಲಿ ಎರಡು ನಾಡ ಬಂದೂಕುಗಳು ಪತ್ತೆಯಾದವು.
ಇಬ್ಬರನ್ನೂ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ನಾಲ್ಕು ದಿನಗಳ ಹಿಂದೆ ಕಾವೇರಿಪುರ ಸಮೀಪದ ಕಗ್ಗಲಿಪುರ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದನ್ನು ಭೇಟೆಯಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಚಿರತೆ ಚರ್ಮವನ್ನು ಸುಲಿಯುವಾಗ ಯಾರೋ ಬಂದ ಹಾಗೇ ಆಯಿತು. ಹಾಗಾಗಿ, ಚಿರತೆ ಕಾಲುಗಳನ್ನು ಮಾತ್ರ ಕತ್ತರಿಸಿಕೊಂಡು ಬಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆ ನಂತರ ಪೊಲೀಸರು ಆರೋಪಿಗಳನ್ನು ಬೇಟೆಯಾಡಿದ ಸ್ಥಳಕ್ಕೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದ್ದು, ಚಿರತೆಯ ದೇಹ ಮತ್ತು ಕತ್ತರಿಸಿದ್ದ ನಾಲ್ಕೂ ಕಾಲುಗಳನ್ನು ವಶಕ್ಕೆ ಪಡೆದಿದ್ದಾರೆ. ಚಿರತೆಯ ಮೃತದೇಹ ಹಾಗೂ ಕಾಲುಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಬಂಧಿತರಿಂದ ಎರಡು ನಾಡ ಬಂದೂಕು ಹಾಗೂ ಸ್ಪೋಟಕಗಳನ್ನು ಜಪ್ತಿ ಮಾಡಿದ್ದಾರೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಕೃಷ್ಣಪ್ಪ ನೇತೃತ್ವದಲ್ಲಿ ಠಾಣೆಯ ಪಿಎಸ್ಐ ಗಣೇಶ್ ಹಾಗೂ ಚೆಲುವರಾಜ್ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಲಾಗಿತ್ತು. ಪ್ರಕರಣವನ್ನು ಭೇದಿಸಿದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ನಗದು ಬಹುಮಾನ ಘೋಷಿಸಿದ್ದಾರೆ.