ಪಿರಿಯಾಪಟ್ಟಣ : ಕೆ.ಹರಳಹಳ್ಳಿ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳದ ಬೆಳೆಯನ್ನು ಯಾರೋ ದುಷ್ಕರ್ಮಿಗಳು ರಾತ್ರೋರಾತ್ರಿ ಟ್ರಾಕ್ಟರ್ ಬಳಸಿ ಉತ್ತು ಹಾಕಿರುವ ಘಟನೆ ಬೈಲುಕುಪ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಕೋಮಲಾಪುರ ಗ್ರಾಮದ ಕೆ.ಎಂ.ಸ್ವಾಮಿ ಎಂಬುವವರಿಗೆ ಸೇರಿದ ಕೆ.ಹರಳಹಳ್ಳಿ ಗ್ರಾಮದ ಸರ್ವೆ ನಂಬರ್ 8 ರಲ್ಲಿ 2 ಎಕರೆ 38 ಗುಂಟೆ ಜಮೀನಿದ್ದು, ಈ ಜಮೀನಿನಲ್ಲಿ ಮುಸುಕಿನ ಜೋಳವನ್ನು ಬೆಳೆಯಲಾಗುತ್ತಿದೆ. ಆದರೆ ಕೆಲವು ಕಿಡಿಗೇಡಿಗಳು ವೈಷಮ್ಯದ ಕಾರಣದಿಂದ ಉಲುಸಾಗಿ ಬೆಳೆದಿದ್ದ ಮುಸುಕಿನ ಜೋಳವನ್ನು ರಾತ್ರೋರಾತ್ರಿ ಟ್ರ್ಯಾಕ್ಟರ್ ಬಳಸಿ ಉತ್ತು ಹಾಕಿದ್ದಾರೆ.
ಈ ಘಟನೆ ಬಗ್ಗೆ ರೈತ ಕೆ.ಎಂ.ಸ್ವಾಮಿ ಹಾಗೂ ಆತನ ಹೆಂಡತಿ ಲತಾ ಮಾತನಾಡಿ, ಕೋಮಲಾಪುರ ಗಡಿ ಭಾಗದ ಕೆ.ಹರಳಹಳ್ಳಿ ಗ್ರಾಮದ ಸರ್ವೆ ನಂಬರ್ 8 ರಲ್ಲಿ ನನಗೆ 2.38 ಎಕರೆ ಭೂಮಿಯನ್ನು ನಮ್ಮ ತಾತ ಜವರೇಗೌಡ ಎಂಬುವವರು 60 ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದರು ನಂತರ ನಂತರ ನಮ್ಮ ತಂದೆ ಮಲ್ಲಿಯಪ್ಪನವರು ನಮೂನೆ-57 ರಲ್ಲಿ ಅಕ್ರಮ ಸಕ್ರಮ ಕಾಯಿದೆ ಅನ್ವಯ ಕಂದಾಯ ಇಲಾಖೆಯಗೆ ಅರ್ಜಿ ಸಲ್ಲಿಸಿ ಭೂ ಹಿಡುವಳಿ ಕಾಯಿದೆ ಅನ್ವಯ ನಮಗೆ ಮಂಜೂರಾತಿ ದೊರಕಿದೆ.
ಇದನ್ನು ಸಹಿಸದ ಕೆಲವು ದುಷ್ಕರ್ಮಿಗಳು ರಾತ್ರೋರಾತ್ರಿ ಜಮೀನಿಗೆ ಧಾವಿಸಿ ಮುಸುಕಿನ ಜೋಳದ ಬೆಳೆಯನ್ನು ಉತ್ತು ಹಾಕಿದ್ದಾರೆ. ಇದರಿಂದ ನನಗೆ 2 ಲಕ್ಷಕ್ಕೂ ಅಧಿಕ ಮೊತ್ತದ ಜೋಳದ ಬೆಳೆ ನಾಶವಾಗಿದೆ. ಆದ್ದರಿಂದ ಈ ಘಟನೆಗೆ ಕಾರಣರಾದವರನ್ನು ಬಂಧಿಸಿ ನನಗೆ ನಷ್ಟದ ಹಣವನ್ನು ಕೊಡಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಗಿ ತಿಳಿಸಿದ್ದಾರೆ.