ಚಾಮರಾಜನಗರ: ಸರ್ಕಾರದ ಶಕ್ತಿಯೋಜನೆಯ ಎಫೆಕ್ಟ್ ನಿಂದಾಗಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಬಾರದೆ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳುವುದಕ್ಕೆ ಕಷ್ಟವಾಗುತ್ತಿದೆ.
ಇನ್ನು ಇಂದು ಸಮಯಕ್ಕೆ ಸರಿಯಾಘಿ ಬಸ್ ಬಂದಿಲ್ಲ ಬಂದ ಬಸ್ ಜನರಿಂದ ತುಂಬಿಹೋಗಿತ್ತು. ಇದನ್ನು ಖಂಡಿಸಿ ಚಾಮರಾಜನಗರ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಕೆಎಸ್ ಆರ್ ಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಬಸ್ ನಿಲ್ದಾಣದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಶಾಲೆ ಮತ್ತು ಕಾಲೇಜಿಗೆ ತೆರಳಲು ಕೆಎಸ್ ಆರ್ ಟಿಸಿ ಬಸ್ ನಲ್ಲಿ ಸ್ಥಳಾವಕಾಶ ಇಲ್ಲದೇ ಇರುವುದನ್ನು ಖಂಡಿಸಿ ಬಸ್ ಡಿಪೋ ಮ್ಯಾನೇಜರ್ ವಿರುದ್ದ ಘೋಷಣೆ ಕೂಗುತ್ತಾ ಪ್ರತಿಭಟಿಸಿದರು. ಇದರಿಂದಾಗಿ ಗುಂಡ್ಲುಪೇಟೆ ಮೈಸೂರು ನಡುವೆ ಕೆಲವು ಸಮಯ ಬಸ್ ಸಂಚಾರ ಸ್ಥಗಿತಗೊಂಡಿತ್ತು.
ರಾಜ್ಯ ಸರ್ಕಾರವು ಮಹಿಳೆಯರಿಗೆ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಶಕ್ತಿ ಯೋಜನೆ ಜಾರಿಗೆ ತಂದ ಬಳಿಕ ಎಲ್ಲಾ ಬಸ್ ಗಳಲ್ಲಿ ಮಹಿಳೆಯರೇ ಹೆಚ್ಚಾಗಿ ಪ್ರಯಾಣ ಮಾಡುತ್ತಿದ್ದಾರೆ ಇದರಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಶಾಲೆ ಮತ್ತು ಕಾಲೇಜಿಗೆ ತೆರಳಲು ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಇದೇ ರೀತಿಯಾಗಿ ಚಾಮರಾಜನಗರ ತಾಲ್ಲೂಕಿನ ಪಣ್ಯದಹುಂಡಿ ಬಳಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆದಿದ್ದು, ಇದರಿಂದಾಗಿ ಚಾಮರಾಜನಗರ ನಂಜನಗೂಡು ಮೈಸೂರು ನಡುವೆ ಬಸ್ ಸಂಚಾರ ಕೆಲ ಸಮಯ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.