NEWSನಮ್ಮಜಿಲ್ಲೆನಮ್ಮರಾಜ್ಯ

ಬರಪರಿಹಾರಕ್ಕೆ ಸರ್ಕಾರ ಜಿಲ್ಲಾಧಿಕಾರಿಗಳ ಖಾತೆಗೆ 800 ಕೋಟಿ ರೂ. ಹಾಕಿಲ್ಲ: ಎಎಪಿಯಿಂದ ಸತ್ಯಶೋಧನ ವರದಿ ಬಿಡುಗಡೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬರಪರಿಹಾರದಡಿ ಜಿಲ್ಲಾಧಿಕಾರಿಗಳ ಖಾತೆಗಳಿಗೆ ಸುಮಾರು 800 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಇದರ ಸತ್ಯ ಪರಿಶೀಲನೆ ಮಾಡಿದಾಗ ಇದುವರೆಗೆ 324 ಕೋಟಿ ರೂ. ಮಾತ್ರ ಬಿಡುಗಡೆ ಮಾಡಲಾಗಿದೆ. ಸಿದ್ದರಾಮಯ್ಯ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ.ನಾಗಣ್ಣ ಆರೋಪಿಸಿದ್ದಾರೆ.

ನಗರದ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರುಗಳು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಕಲೆಹಾಕಿದ್ದಾರೆ. ಮೈಸೂರು ಜಿಲ್ಲೆಗೆ ಬರಪರಿಹಾರದಡಿ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿಗಾಗಿ 13 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ. ತುಮಕೂರು ಜಿಲ್ಲೆಗೆ ಈವರೆಗೆ ಕೇವಲ 15 ಕೋಟಿ ರೂ. ಮಾತ್ರ ಬಿಡುಗಡೆ ಮಾಡಲಾಗಿದೆ ಎಂದ ಅವರು, ಎಲ್ಲ ಜಿಲ್ಲೆಗಳಿಗೆ ಬಿಡುಗಡೆಯಾಗಿರುವ ಹಣದ ಮಾಹಿತಿಯನ್ನು ನೀಡಿದರು.

ರಾಜ್ಯ ಸರ್ಕಾರ ಅಧ್ಯಯನ ಮಾಡಿ ಬರಪೀಡಿತ ಪ್ರದೇಶಗಳಿಗೆ ಒಟ್ಟು 35,000 ಕೋಟಿ ರೂ. ಹಣದ ಅಗತ್ಯವಿರುವುದಾಗಿ ವರದಿ ತಯಾರಿಸಿದೆ. ಇದರಲ್ಲಿ ಕೇಂದ್ರ ಸರ್ಕಾರ 18,000 ಕೋಟಿ ರೂ. ನೀಡಬೇಕು ಎಂದು ಪತ್ರ ಬರೆದಿರುವುದಾಗಿ ಸಿಎಂ ಹೇಳಿದ್ದಾರೆ. ಉಳಿದ 17,000 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ನೀಡಬೇಕು. ಆದರೆ, ಇದುವರೆಗೆ ಈ ಹಣವನ್ನು ಏಕೆ ಬಿಡುಗಡೆ ಮಾಡಿಲ್ಲ ಎಂಬುದನ್ನು ಉತ್ತರಿಸಲಿ ಎಂದು ಒತ್ತಾಯಿಸಿದರು.

ಮೊದಲು ರಾಜ್ಯ ಸರ್ಕಾರ ತನ್ನ ಪಾಲನ್ನು ನೀಡಿ ಆಮೇಲೆ ಕೇಂದ್ರದ ಮೇಲೆ ಒತ್ತಡ ಹಾಕಲಿ. ಬರೀ ಕೇಂದ್ರ ಸರ್ಕಾರವನ್ನು ದೂರಿಕೊಂಡು, ತಾವು ಕೊಡಬೇಕಾದ ಪಾಲು ಕೊಡದಿದ್ದರೆ ರೈತರಿಗೆ ಅನ್ಯಾಯ ಮಾಡಿದಂತೆ. ರೈತರು ಸತ್ತಮೇಲೆ ತಾವು ಹಣ ಬಿಡುಗಡೆ ಮಾಡ್ತೀರಾ?. ಬರ ಇದ್ದಾಗ ಜಾನುವಾರುಗಳಿಗೆ ಮೇವು ಎಲ್ಲಿಂದ ಬರುತ್ತೆ, ಹೊರಗಡೆಯಿಂದ ಮೇವು ತರಬೇಕು. ನೀವು ಕೊಟ್ಟಿರುವ ಹಣದಲ್ಲಿ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಯಾವ ಆಧಾರದ ಮೇಲೆ ಹಣ ಬಿಡುಗಡೆ ಮಾಡಿದ್ದೀರಾ? ಬರಿ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷಗಳ ನಾಯಕರು ಪರಸ್ಪರ ಕಿತ್ತಾಡಿಕೊಂಡು ನಾಟಕ ಆಡ್ತೀದ್ದೀರಾ ಎಂದರು.

ಇನ್ನೊಂದು ವಾರದಲ್ಲಿ ರಾಜ್ಯ ಸರ್ಕಾರ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡದಿದ್ದರೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಾಗುವುದು, ಇದನ್ನು ಜನಾಂದೋಲನವಾಗಿ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕರ್ನಾಟಕವನ್ನು ಸತತವಾಗಿ ಕಡೆಗಣಿಸಲಾಗುತ್ತಿದೆ. 2017ರಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಾಗ 35 ಸಾವಿರ ಕೋಟಿ ನಷ್ಟವಾಗಿತ್ತು, ಅಂದು ಕೂಡ ಯಾವ ಕೇಂದ್ರದ ನಾಯಕರು ರಾಜ್ಯಕ್ಕೆ ಭೇಟಿ ನೀಡಲಿಲ್ಲ. ಆದರೆ, ಗುಜರಾತ್‌ನಲ್ಲಿ ಪ್ರವಾಹ ಆದಾಗ ಸ್ವತಃ ಪ್ರಧಾನಿಗಳೇ ಹೋಗಿ ಪರಿಶೀಲನೆ ನಡೆಸಿದರು. ಅಂದು ಕೇಂದ್ರ ಕೇವಲ 1,500 ಕೋಟಿ ಪರಿಹಾರ ನೀಡಿತು. ಕರ್ನಾಟಕ ಪ್ರತಿ ವರ್ಷ ಸುಮಾರು 5 ಲಕ್ಷ ಕೋಟಿ ತೆರಿಗೆ ನೀಡುತ್ತಿದೆ. ಅವರು ರಾಜ್ಯಕ್ಕೆ ಭಿಕ್ಷೆ ಕೊಡುತ್ತಿದ್ದಾರಾ ಎಂದರು.

2019ರಲ್ಲಿ ಪ್ರವಾಹ ಆದಾಗ 50 ಸಾವಿರ ಕೋಟಿ ರೂ. ನಷ್ಟ ಆಗಿದೆ ಎಂದು ರಾಜ್ಯ ವರದಿ ಕೊಟ್ಟರೆ, ಕೇಂದ್ರ ಕೊಟ್ಟದ್ದು ಕೇವಲ 1,900 ಕೋಟಿ ರೂ. ಮಾತ್ರ. ಈಗ ಇಲ್ಲಿ ಬರ ಬಂದಿದ್ದರೆ, ಕೇಂದ್ರ ನಾಯಕರು ಇತರೆ ರಾಜ್ಯಗಳ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ರಾಜ್ಯದಲ್ಲಿ ಕರೆಂಟ್ ಕಳ್ಳ, ಹಲೋ ಅಪ್ಪಾ, ಬ್ಲೂ ಫಿಲಂ ಎಂದುಕೊಂಡು ಕಿತ್ತಾಡುತ್ತಿದ್ದಾರೆ. ಕೂಡಲೇ ಸಿದ್ದರಾಮಯ್ಯನವರು ಎಚ್ಚೆತ್ತು ಹಣ ಬಿಡುಗಡೆ ಮಾಡಲಿ ಎಂದರು.

ಮೇಕೆದಾಟು ಯೋಜನೆ ಎಲ್ಲಿಗೆ ಬಂತು?: ಡಿಸಿಎಂ ಡಿಕೆ ಶಿವಕುಮಾರ್ ಅವರು ಮೇಕೆದಾಟು ಯೋಜನೆ ಮಾಡ್ತೀವಿ ಅಂತಾ ಪ್ರಚಾರ ಮಾಡಿದರು. ಅವರೇ ನೀರಾವರಿ ಸಚಿವರಾಗಿದ್ದಾರೆ ಈ ಯೋಜನೆ ಏನಾಗಿದೆ, ಬೆಂಗಳೂರಿನಲ್ಲಿ ಕೂತು ಬ್ರಾಂಡ್ ಬೆಂಗಳೂರು ಮಾಡ್ತೀನಿ ಅಂತಾ ರಿಯಲ್ ಎಸ್ಟೇಟ್ ಲಾಬಿ ಮಾಡ್ತಿದ್ದಾರೆ. ಬೆಂಗಳೂರು ಈಗಾಗಲೇ ಸಿಲಿಕಾನ್ ಸಿಟಿ ಎಂದು ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ನೀವೇನು ಹೊಸದಾಗಿ ಬ್ರಾಂಡ್ ಮಾಡೋದು ಎಂದು ಪ್ರಶ್ನಿಸಿದರು.

7 ಗಂಟೆ ವಿದ್ಯುತ್ ಕೊಡದೆ ಅನ್ಯಾಯ: ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ಸದಂ ಅವರು ಮಾತನಾಡಿ, ರೈತರು ವಿದ್ಯುತ್ ಕಂಪನಿಯಿಂದ ಪಂಪ್‌ಸೆಟ್‌ಗಳಿಗೆ ಹಣ ನೀಡಿ ವಿದ್ಯುತ್ ಸಂಪರ್ಕ ಪಡೆಯಬೇಕು ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ಈ ಆದೇಶ ವಾಪಸ್ ಪಡೆದಿರುವುದಾಗಿ ಸಿಎಂ ಸಿದ್ದರಾಮಯ್ಯ ಪತ್ರಕರ್ತರ ಮುಂದೆ ಸುಳ್ಳು ಹೇಳಿದ್ದಾರೆ. ಆದರೆ, ಅಧಿಕಾರಿಗಳಿಗೆ ಈ ಬಗ್ಗೆ ಅಧಿಕೃತ ಆದೇಶ ನೀಡಿಲ್ಲ ಎಂದರು.

ಕೃಷಿ ಪಂಪ್ ಸೆಟ್ ಅಳವಡಿಕೆ ಅನುಮತಿ ಕೋರಿ ಸಲ್ಲಿಕೆಯಾಗಿರುವ ಸುಮಾರು 4,30,000 ಅರ್ಜಿಗಳು ಬಾಕಿ ಉಳಿದಿವೆ. ಇದಕ್ಕೆ 6000 ಕೋಟಿ ರೂಪಾಯಿ ಖರ್ಚಾಗುತ್ತದೆ ಇಷ್ಟು ಹಣ ನಮ್ಮಲ್ಲಿ ಇಲ್ಲ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ಅವರು ಕೈಚೆಲ್ಲಿ ಕೂತಿದ್ದು, ರೈತರು ಏನು ಮಾಡಬೇಕು. ರೈತರಿಗೆ 7 ಗಂಟೆ ವಿದ್ಯುತ್ ನೀಡುವುದಾಗಿ ಸಿಎಂ ಹೇಳಿದ್ದರೂ ಕೂಡ ಅದು ವಾಸ್ತವವಾಗಿ ಜಾರಿಯಾಗಿಲ್ಲ. ಪ್ರಧಾನಿ ಮೋದಿ ಭೇಟಿಗೆ ಸಮಯ ನೀಡುತ್ತಿಲ್ಲ ಎಂದು ಕೇಂದ್ರದ ಮೇಲೆ ಗೂಬೆ ಕೂರಿಸುತ್ತೀರಾ. ತಾವು ಹೋರಾಟದಿಂದ ಬಂದವರು, ಎಲ್ಲಾ ಶಾಸಕರನ್ನು ಕರೆದುಕೊಂಡು ಹೋಗಿ ದೆಹಲಿಯಲ್ಲಿ ಪ್ರತಿಭಟನೆ ಮಾಡಿ ಎಂದು ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಪ್ರತಿಕ್ರಿಯಿಸಿದರು.

ಒಂದೂವರೆ ವರ್ಷದಲ್ಲಿ 1219 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಾರಿ ಬೆಳೆ ಬೆಳೆಯಲು ಸಾಲ ಮಾಡಿಕೊಂಡಿದ್ದಾರೆ, ಬರದಿಂದ ಈಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ರೈತರ ಆತ್ಮಹತ್ಯೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ, ಕಾಂಗ್ರೆಸ್ ಮತ್ತು ಬಿಜೆಪಿ ರಾಜಕೀಯ ಮಾಡುವುದನ್ನು ಬಿಟ್ಟು ರೈತರಿಗೆ ನೆರವಾಗಲಿ ಎಂದು ಆಗ್ರಹಿಸಿದರು.

ಪಕ್ಷದ ಉಪಾಧ್ಯಕ್ಷ ನಂಜಪ್ಪ ಕಾಳೇಗೌಡ ಸುದ್ದಿಗೋಷ್ಠಿಯಲ್ಲಿ ಇದ್ದರು.

Leave a Reply

error: Content is protected !!
LATEST
ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ