ಬನ್ನೂರು: ಹೋಬಳಿಯ ಅತ್ತಹಳ್ಳಿ ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯ ಪ್ರಾರಂಭಿಸಬೇಕು ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಅವರಿಗೆ ಗ್ರಾಮದ ರೈತ ಮುಖಂಡರು ಮನವಿ ಸಲ್ಲಿಸಿದರು.
ಇಂದು ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಸಚಿವರನ್ನು ಭೇಟಿ ಮಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮತ್ತು ಇತರರು ಮನವಿ ಸಲ್ಲಿಸಿದರು. ಈ ವೇಳೆ ಮೈಸೂರು ಜಿಲ್ಲೆ, ತಿ.ನರಸೀಪುರ ತಾಲೂಕು, ಬನ್ನೂರು ಹೋಬಳಿ ಅತ್ತಹಳ್ಳಿ ಗ್ರಾಮವು ಬನ್ನೂರು ಪಶು ಆಸ್ಪತ್ರೆಗೆ ಸೇರಿದ್ದು ಈ ಬನ್ನೂರು ಪಟ್ಟಣ ಆಸ್ಪತ್ರೆ ವ್ಯಾಪ್ತಿಯಲ್ಲಿ 23 ಪುರಸಭೆ ವಾರ್ಡ್ಗಳನ್ನು ಹೊಂದಿದ್ದು ಈ ಪಶು ಆಸ್ಪತ್ರೆಗೆ 16 ಗ್ರಾಮಗಳು ಸಹ ಸೇರಿವೆ.
ಇಲ್ಲಿಗೆ 5,500 ಕ್ಕೂ ಹೆಚ್ಚು ಹಸು, ಎಮ್ಮೆ, ಕರುಗಳು ಹಾಗೂ 10,000ಕ್ಕೂ ಹೆಚ್ಚು ಕುರಿ, ಮೇಕೆಗಳು ಇದ್ದು ಈ ಪಶು ಆಸ್ಪತ್ರೆ ಬನ್ನೂರಿನಲ್ಲಿ ಒಬ್ಬರೇ ಮುಖ್ಯ ಪಶು ವೈದ್ಯಾಧಿಕಾರಿ ಇದ್ದಾರೆ. ಅವರೊಬ್ಬರೆ ಇಷ್ಟು ಗ್ರಾಮಗಳ ಜಾನುವಾರುಗಳ ಆರೋಗ್ಯ ಕಾಪಾಡಲು ಆಸಾಧ್ಯವಾಗಿದೆ.
ಹೀಗಾಗಿ ಸಮಯಕ್ಕೆ ಸರಿಯಾಗಿ ಪಶು ತಪಾಸಣೆ ನಡೆಸಿ ಚಿಕಿಸ್ತೆ ನೀಡಲು ಸಾಧ್ಯವಾಗದ ಕಾರಣ ಜಾನುವಾರುಗಳ ರಕ್ಷಣೆ ಮಾಡಲು ಕಷ್ಟಕರವಾಗಿದೆ. ಅಲ್ಲದೆ ಒಬ್ಬರೇ ಪಶು ವೈದ್ಯಾಧಿಕಾರಿಗೆ ತುಂಬಾ ಕಾರ್ಯ ಒತ್ತಡವಾಗುತ್ತಿದೆ. ಆದ್ದರಿಂದ ಅತ್ತಹಳ್ಳಿ ಗ್ರಾಮದಲ್ಲಿ ಒಂದು ನೂತನ ಪಶು ಚಿಕಿತ್ಸಾಲಯ ಪ್ರಾರಂಭಿಸಿ ಎಂದು ಮನವಿ ಮಾಡಿದರು.
ಇನ್ನು ಅತ್ತಹಳ್ಳಿ ಗ್ರಾಮದೊಂದಿಗೆ ಬಿ.ಬೆಟ್ಟಹಳ್ಳಿ, ಮೇಗಳಕೊಪ್ಪಲು, ಕುಂತನಹಳ್ಳಿ, ಕಂಚನಹಳ್ಳಿ, ಗಾಣಿಗನಕೊಪ್ಪಲು ಹಾಗೂ ಸೇನಾಪತಿಹಳ್ಳಿ ಒಳಗೊಂಡಂತೆ 2500ಕ್ಕೂ ಹೆಚ್ಚು ಹಸು, ಎಮ್ಮೆ, ಕರುಗಳು ಇದ್ದು ಹಾಗೂ 3000ಕ್ಕೂ ಹೆಚ್ಚು ಕುರಿ, ಮೇಕೆಗಳಿದ್ದು ಇವುಗಳ ಆರೋಗ್ಯ ರಕ್ಷಣೆಗೆ ಅತ್ತಹಳ್ಳಿಯಲ್ಲಿ ಪಶು ಚಿಕಿತ್ಸಾಲಯ ಪ್ರಾರಂಭಿಸಿದರೆ ರೈತರಿಗೂ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿ ಸಚಿವ ಕೆ.ವೆಂಕಟೇಶ್ ಅವರು, ಈ ಬಗ್ಗೆ ಪರಿಶೀಲನೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.