ಬೆಂಗಳೂರು: ವಕೀಲರೊಬ್ಬರಿಗೆ ನಟ ದರ್ಶನ್ ಮನೆ ಶ್ವಾನ ಕಚ್ಚಿದ್ದ ಪ್ರಕರಣ ಸಂಬಂಧಿಸಿದಂತೆ ನಟನ ಹೆಸರಿಲ್ಲದೆಯೇ ಚಾರ್ಜ್ಶೀಟ್ ಸಲ್ಲಿಕೆಗೆ ಪೊಲೀಸರು ಸಿದ್ಧತೆ ಮಾಡಿದ್ದಾರೆ. ತನಿಖೆಯಲ್ಲಿ ದರ್ಶನ್ ಪಾತ್ರ ಇಲ್ಲದಿರುವುದು ಸಾಬೀತಾಗಿದ್ದರಿಂದ ಅವರ ಹೆಸರು ಬಿಟ್ಟು ಚಾರ್ಜ್ಶೀಟ್ ಸಲ್ಲಿಕೆಗೆ ಸಿದ್ಧತೆ ಮಾಡಲಾಗಿದೆ.
ಪೊಲೀಸ್ ತನಿಖೆ ವೇಳೆ ನಟ ದರ್ಶನ್ ಪಾತ್ರ ಇಲ್ಲದಿರುವುದು ಸ್ಪಷ್ಟವಾಗಿದೆ. ನಟನ ಕಾಲ್ ಸಿಡಿಆರ್ ಸಮೇತ ಪರಿಶೀಲನೆ ನಡೆಸಲಾಗಿದ್ದು, ಕೃತ್ಯದಲ್ಲಿ ದರ್ಶನ್ ಪಾತ್ರದ ಬಗ್ಗೆ ಯಾವುದೇ ಸಾಕ್ಷಿ ಇಲ್ಲ. ಘಟನೆಯಾದಾಗ ಅವರು ಸ್ಥಳದಲ್ಲಿರಲಿಲ್ಲ ಮತ್ತು ಈ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲವೆಂಬುದು ಸಾಬೀತಾಗಿದೆ.
ಹೌದು. ಆರ್.ಆರ್ ನಗರ ಪೊಲೀಸರು ನಟ ದರ್ಶನ್ಗೆ ಕ್ಲೀನ್ ಚಿಟ್ ಕೊಡಲು ಮುಂದಾಗಿದ್ದಾರೆ ಎನ್ನುತ್ತಿದೆ ಪೊಲೀಸ್ ಮೂಲಗಳು. ದರ್ಶನ್ ಮನೆಯ ನಾಯಿ ಅಮಿತಾ ಜಿಂದಾಲ್ ಅವರಿಗೆ ಕಚ್ಚಿತ್ತು. ಈ ಸಂಬಂಧ ಮಹಿಳೆ ನಟ ದರ್ಶನ್ ಹಾಗೂ ಮನೆ ಕೆಲಸದವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣದಲ್ಲಿ ಆರೋಪಿಗಳಾಗಿದ್ದ ದರ್ಶನ್ ಹಾಗೂ ಮನೆ ಕೆಲಸದವನಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿ ಘಟನೆ ಬಗ್ಗೆ ಇಬ್ಬರ ಬಳಿ ಆರ್.ಆರ್.ನಗರ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದರು. ಈಗ ಚಾರ್ಜ್ ಶೀಟ್ ಸಲ್ಲಿಸಲು ಆರ್.ಆರ್.ನಗರ ಪೊಲೀಸರು ತಯಾರಿ ಮಾಡುತ್ತಿದ್ದಾರೆ.
ಪ್ರಕರಣದಲ್ಲಿ ದರ್ಶನ್ ಪಾತ್ರ ಅಷ್ಟಾಗಿ ಕಂಡು ಬರದ ಹಿನ್ನೆಲೆಯಲ್ಲಿ ದರ್ಶನ್ ಹೆಸರು ಕೈಬಿಟ್ಟು ಚಾರ್ಜ್ಶೀಟ್ ಸಲ್ಲಿಸಲು ಪೊಲೀಸರು ಮುಂದಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆ ದಿನ ದರ್ಶನ್ ಇರಲಿಲ್ಲ: ಘಟನೆ ನಡೆದಾಗ ನಟ ದರ್ಶನ್ ಘಟನಾ ಸ್ಥಳದಲ್ಲಿ ಇರಲಿಲ್ಲ. ನಾಯಿ ದಾಳಿಯ ದಿನ ದರ್ಶನ್ ಹೊರ ರಾಜ್ಯದಲ್ಲಿ ಶೂಟಿಂಗ್ನಲ್ಲಿ (Shooting) ಭಾಗಿಯಾಗಿದ್ದರು. ದರ್ಶನ್ ಹೊರಗಡೆ ಇರುವುದನ್ನು ಟವರ್ ಲೋಕೇಷನ್ ಮೂಲಕ ಪೊಲೀಸರು ಖಾತ್ರಿ ಪಡಿಸಿಕೊಂಡಿದ್ದಾರೆ.
ದರ್ಶನ್ ನಾಯಿ ನೋಡಿಕೊಳ್ಳಲು ಕೆಲಸದವರನ್ನು ನೇಮಕ ಮಾಡಿದ್ದರು. ಮಹಿಳೆ ದರ್ಶನ್ ವಿರುದ್ಧ ಮಾಡಿರುವ ಆರೋಪಗಳಿಗೆ ಸೂಕ್ತ ಸಾಕ್ಷ್ಯಗಳಿಲ್ಲ. ಕೆಲಸದ ವ್ಯಕ್ತಿ ಮಾಡಿರುವ ತಪ್ಪಿಗೆ ಮಾಲೀಕನನ್ನು ಆರೋಪಿ ಮಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ದರ್ಶನ್ ಹೆಸರು ಕೈಬಿಟ್ಟು ಚಾರ್ಜ್ಶೀಟ್ ಸಲ್ಲಿಸಲು ಪೊಲೀಸರು ಮುಂದಾಗಿದ್ದಾರೆ.