ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೌಕರ ಜಗದೀಶ್ ಸೇರಿದಂತೆ ಎಂಟು ಮಂದಿ ಸಾರಿಗೆ ನೌಕರರ ವಿರುದ್ಧ (2021ರ ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ವೇಳೆ) ನಗರದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಸಂಬಂಧ ಮಂಗಳವಾರ 6ನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ 8 ಮಂದಿ ಸಾರಿಗೆ ನೌಕರರ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ಕಳೆದ 2021ರಲ್ಲೇ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಆದರೆ ಆರೋಪಿಗಳು ಈವರೆಗೂ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಹೀಗಾಗಿ ಕೋರ್ಟ್ ಪೊಲೀಸರಿಗೆ ಆರೋಪಿಗಳ ಹಾಜರುಪಡಿಸುವಂತೆ ತಾಕೀತು ಮಾಡಿತ್ತು.
ಹೀಗಾಗಿ ಮಂಗಳವಾರ 8 ಮಂದಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದು, ಅವರಿಗೆ ನಾಲ್ವರು ಸಾರಿಗೆ ನೌಕರರು ಜಾಮೀನು (surety) ಕೊಟ್ಟಿದ್ದರಿಂದ 6ನೇ ಎಸಿಎಂಎಂ ನ್ಯಾಯಾಲಯ 8 ಮಂದಿಗೆ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ವಕಾಲತು ವಹಿಸಿದ ಸುಪ್ರೀಂ ಕೋರ್ಟ್ ಮತ್ತು ಕರ್ನಾಟಕ ಹೈ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು 8 ಮಂದಿಯೂ ಬಿಎಂಟಿಸಿಯ ನೌಕರರಾಗಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಇನ್ನು ಈ ಎಲ್ಲ ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿರುವುದಿಲ್ಲ. ಆದ್ದರಿಂದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ದಾಖಲಿಸಿರುವ ದೂರು ಸುಳ್ಳಿನಿಂದ ಕೂಡಿರುತ್ತದೆ. ಹೀಗಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ಎಲ್ಲ ಆರೋಪಿಗಳಿಗೂ ಜಾಮೀನು ಮಂಜೂರು ಮಾಡಬೇಕು ಎಂದು ವಾದ ಮಂಡಿಸಿದರು.
ಅಲ್ಲದೆ ಈ ಆರೋಪಿಗಳಿಗೆ ಜಾಮೀನು ದೊರೆತಲ್ಲಿ ಅವರು ಮುಂದೆ ಕರ್ತವ್ಯ ಮಾಡಲು ತುಂಬ ಅನುಕೂಲಕರವಾಗುತ್ತದೆ ಎಂದು ನ್ಯಾಯಾಧೀಶರ ಮುಂದೆ ವಕೀಲರು ಮನವಿ ಮಾಡಿಕೊಂಡಿದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.
ನೌಕರರಿಂದ ಶುಲ್ಕ ಪಡೆಯದೆ ವಕಾಲತು ವಹಿಸಿದ ವಕೀಲ ಎಚ್.ಬಿ.ಶಿವರಾಜು: ಈ ಎಂಟು ಮಂದಿ ಸಾರಿಗೆ ನೌಕರರ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿಸಿದ್ದು, ಈ ಪ್ರಕರಣಗಳ ಸಂಬಂಧ ವಕೀಲರು ನೌಕರರಿಂದ ಯಾವುದೇ ಶುಲ್ಕ ಪಡೆಯದೆ ಮಾನವೀಯತೆ ಮೆರೆದಿದ್ದಾರೆ.