ಬೆಂಗಳೂರು: ಹುಬ್ಬಳ್ಳಿಯಲ್ಲಿ ಬಂಧಿಸಲಾಗಿರುವ ಶ್ರೀಕಾಂತ್ ಪೂಜಾರಿಯನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಬಿಜೆಪಿ ಇಂದು ಪ್ರತಿಭಟನೆ ನಡೆಸುತ್ತಿದೆ. ಅದರಂತೆ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಕಳೆದ 31 ವರ್ಷದ ಹಿಂದಿನ ಕೇಸ್ ರೀ ಓಪನ್ ಮಾಡಿ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಲಾಗಿದೆ. ಇದು ಸರಿಯಲ್ಲ ಎಂದು ಖಡಿಸಿ ಬಿಜೆಪಿಯು ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲೂ ಹೋರಾಟದ ಕಹಳೆ ಮೊಳಗಿಸುತ್ತಿದೆ.
ಇನ್ನು ಆಯಾ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ವಿಪಕ್ಷ ನಾಯಕ ಆರ್.ಅಶೋಕ್ ಇಂದು ಹುಬ್ಬಳ್ಳಿಗೆ ಭೇಟಿ ನೀಡಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿಭಟನೆಯ ಬಳಿಕ ಶ್ರೀಕಾಂತ್ ಪೂಜಾರಿ ಅವರ ನಿವಾಸಕ್ಕೂ ಅಶೋಕ್ ಭೇಟಿ ನೀಡಲಿದ್ದಾರೆ.
ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಶತಮಾನಗಳ ಕನಸಿನ ರಾಮಮಂದಿರ ನಿರ್ಮಾಣದ ಹೊಸ್ತಿಲಿನಲ್ಲಿದೆ. ಇಂತಹ ಸಮಯದಲ್ಲಿ 1992ರಲ್ಲಿ ಹೋರಾಡಿದ್ದ ಇಬ್ಬರು ಹಿಂದೂ ಕಾರ್ಯಕರ್ತರನ್ನು ಬಂಧನ ಮಾಡಲಾಗಿದೆ. ಈ ನಡುವೆ ರಾಜ್ಯ ಸರ್ಕಾರ ಈ ಹಿಂದೆ ರಾಮಮಂದಿರಕ್ಕಾಗಿ ಕರಸೇವಕರಾಗಿ ಹೋರಾಟ ಮಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ದುರಂತವೇ ಸರಿ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.