ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸೇರಿದ ಜಮೀನು ಒತ್ತುವರಿಯಾಗಿದ್ದರೂ, ‘ಒತ್ತುವರಿಯಾಗಿಲ್ಲ’ ಎಂದು ವರದಿ ನೀಡಿದ್ದ ಆರೋಪದ ಮೇರೆಗೆ ಬಿಎಂಟಿಸಿ ಸಹಾಯಕ ತಾಂತ್ರಿಕ ಇಂಜಿನಿಯರ್ ಕುಮಾರಸ್ವಾಮಿ ಅವರನ್ನು ಅಮಾನತು ಮಾಡಲಾಗಿದೆ.
ಸಂಸ್ಥೆಯ ಜಮೀನು, ಸ್ವತ್ತುಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಬಿಎಂಟಿಸಿ ಸ್ಥಿರಾಸ್ತಿ ಶಾಖೆಯಿಂದ ಸುತ್ತೋಲೆ ಹೊರಡಿಸಲಾಗಿತ್ತು. ಇದರನ್ವಯ ಬೆಂಗಳೂರು ದಕ್ಷಿಣ ತಾಲೂಕಿನ ಬೆಟ್ಟದಾಸನಪುರ ಗ್ರಾಮದ ಸರ್ವೆ ನಂಬರ್ 20ರಲ್ಲಿ ಸಂಸ್ಥೆಗೆ ಮಂಜೂರಾಗಿರುವ 5 ಎಕರೆ ಖಾಲಿ ಜಾಗದಲ್ಲಿ ಅನಧಿಕೃತ ಒತ್ತುವರಿ ಆಗಿಲ್ಲ ಎಂದು ಆಗ ಬಿಎಂಟಿಸಿ ಘಟಕ 19ರಲ್ಲಿ (ಎಲೆಕ್ಟ್ರಾನಿಕ್ಸ್ ಸಿಟಿ) ವ್ಯವಸ್ಥಾಪಕರಾಗಿದ್ದ ಕುಮಾರಸ್ವಾಮಿ 2023ರ ಅಕ್ಟೋಬರ್‌ನಲ್ಲಿ ವರದಿ ನೀಡಿದ್ದರು.
ಸ್ಥಿರಾಸ್ತಿ ಶಾಖೆಯ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಒಂದು ಎಕರೆ ಜಮೀನನ್ನು ಎಂ.ನಾರಾಯಣ ಸ್ವಾಮಿ ಅವರು ಒತ್ತುವರಿ ಮಾಡಿಕೊಂಡಿದ್ದಲ್ಲದೇ, ಕಟ್ಟಡ ಕಾಮಗಾರಿ ನಡೆಸುತ್ತಿರುವುದು ಕಂಡು ಬಂದಿತ್ತು. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಸಂಸ್ಥೆಯ ಜಮೀನನ್ನು ಖಾಸಗಿ ವ್ಯಕ್ತಿ ಒತ್ತುವರಿ ಮಾಡಿಕೊಂಡಿದ್ದರೂ ಜಮೀನು ಒತ್ತುವರಿಯಾಗಿಲ್ಲ ಎಂದು ಸುಳ್ಳು ವರದಿಯನ್ನು ನೀಡುವ ಮೂಲಕ ಕುಮಾರಸ್ವಾಮಿ ಅವರು ಕರ್ತವ್ಯಲೋಪ ಎಸಗಿದ್ದಾರೆ. ಈ ಕಾರಣಕ್ಕಾಗಿ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಿ, ಬಿಎಂಟಿಸಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.