ಬೆಂಗಳೂರು: ಶ್ರೀರಾಮ ಬಿಜೆಪಿಯವರ ಅಪ್ಪನ ಮನೆ ಆಸ್ತಿನಾ ಎಂದು ಪ್ರಶ್ನೆ ಮಾಡುವ ಮೂಲಕ ಕಮಲ ನಾಯಕರ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಇದ್ದಾನೆ. ನನ್ನ ಹೆಸರಿನಲ್ಲಿ ಶಿವ ಇದ್ದಾನೆ, ಶಿವನ ಮಗ ಕುಮಾರನೂ ಇದ್ದಾನೆ. ಬಿಜೆಪಿಯವರಿಗೆ ಹೊಟ್ಟೆ ಉರಿ. ಏನಾದ್ರೂ ಮಾಡಿ ನಮ್ಮನ್ನು ಹಿಂದೂ ವಿರೋಧಿಗಳು ಅಂತಾ ಬಿಂಬಿಸಲು ಕುತಂತ್ರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನು ನಮ್ಮ ಸರ್ಕಾರ ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಪೂಜೆಗೆ ಆದೇಶ ಮಾಡಿಲ್ವಾ?. ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಭೆ ಮಾಡಿ, ಪೂಜೆ ಮಾಡಲು ನಮ್ಮ ಸರ್ಕಾರ ಹೇಳಿದೆ. ರಘುಪತಿ ರಾಘವ ರಾಜಾರಾಮ್ ಪತೀತ ಪಾವನ ಸೀತಾರಾಮ್ ಅಂತಾ ಗಾಂಧೀಜಿ ಹೇಳಿಲ್ವಾ ಎಂದು ಪ್ರಶ್ನಿಸಿದ ಡಿಕೆಶಿ, ರಾಮನನ್ನೂ ಪೂಜಿಸ್ತೀವಿ, ಸೀತೆಯನ್ನೂ ಪೂಜಿಸ್ತೀವಿ ಎಂದು ಬಿಜೆಪಿಗರಿಗೆ ಟಕ್ಕರ್ ಕೊಟ್ಟರು.
ಇನ್ನು ಬಿಜೆಪಿಯವರು ಎಷ್ಟು ಕುತಂತ್ರ ಮಾಡುತ್ತಿದ್ದಾರೆ ಎಂದರೆ, ರಾಹುಲ್ ಗಾಂಧಿ ಅವರ ಯಾತ್ರೆಗೆ ತಡೆ ಮಾಡುತ್ತಿದ್ದಾರೆ. ಅದನ್ನು ಖಂಡಿಸಿ ಇಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಕಾರ್ಯಕರ್ತರು ಬಹಳ ಆಸಕ್ತಿಯಿಂದ ಅಭಿಮಾನದಿಂದ ಬಂದಿದ್ದಾರೆ ಎಂದು ಹೇಳಿದರು.
ಯಾರಿಗೂ ಹೆದರದೆ ರಾಹುಲ್ ಗಾಂಧಿ ನೇರವಾಗಿ ಮುನ್ನಡೆಯಬೇಕು. ಇವತ್ತು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೀತಾ ಇದೆ. ಒಗ್ಗಟಿನಿಂದ ಮಾರ್ಗದರ್ಶನ ಆಗ್ತಾ ಇದೆ. ಯಾತ್ರೆಗೆ ಏನು ಷ್ಯಡ್ಯಂತ್ರ ನಡೀತಾ ಇದೆ ಅದು ಖಂಡನೀಯ. ನಾವು ಯಾವುದಕ್ಕೂ ಹೆದರುವುದಿಲ್ಲ. ಅವರ ಜೈಲು, ಬೇಲು, ಕೇಸು ಯಾವುದಕ್ಕೂ ಹೆದರಲ್ಲ. ಈ ದೇಶದ ಅಭಿವೃದ್ಧಿಗೆ ಐಕ್ಯತೆಗೆ ನಾವು ಒಮ್ಮತ ಮೂಡಿಸುತ್ತಿದ್ದೇವೆ ಎಂದರು.