NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಕೋಲಾರ- ಮಾಡಿದ ಹೆಚ್ಚುವರಿ ಡ್ಯೂಟಿಗೆ ಓಟಿ ಕೇಳಿದರೆ ಮಾರ್ಗವನ್ನೇ ಅನ್ಯ ಡಿಪೋಗೆ ವರ್ಗಾವಣೆ ಮಾಡುವ ಭೂಪರು: ಭ್ರಷ್ಟ ಅಧಿಕಾರಿಗಳು ಮಾಡಿದ್ದೇ ಕಾನೂನು

ವಿಜಯಪಥ ಸಮಗ್ರ ಸುದ್ದಿ

ಕೋಲಾರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕೋಲಾರ ವಿಭಾಗದಲ್ಲಿ ಅಧಿಕಾರಿಗಳ ಕಿರುಕುಳ ಎಲ್ಲೆ ಮೀರಿದ್ದು, ನೌಕರರಿಗೆ ಓಟಿ ಕೊಡದೆ ಬಿಟ್ಟಿ ದುಡಿಸಿಕೊಳ್ಳುತ್ತದ್ದಾರೆ ಎಂದು ವಿಭಾಗದ ನೌಕರರೊಬ್ಬರು ಲೋಕಾಯುಕ್ತಕ್ಕೆ ಮತ್ತು ಸಂಬಂಧಪಟ್ಟ ಮೇಲಧಿಕಾರಿಗಳು ಸಚಿವರಿಗೆ ದೂರು ನೀಡಿದ್ದಾರೆ.

ಕೋಲಾರ ವಿಭಾಗದ ಕೆಲವು ಅಧಿಕಾರಿಗಳು ಲಂಚಾವತಾರದ ಜತೆಗೆ ನೌಕರರ ಮೇಲೆ ದರ್ಪ ಮೆರೆಯುತ್ತಿದ್ದಾರೆ. ಅಲ್ಲದೆ ಸಾರ್ವಜನಿಕರಿಗೆ ಸಂಬಂಧಪಟ್ಟ ಸಾರಿಗೆ ಸಂಸ್ಥೆಯನ್ನು ತಮ್ಮದೇ ಎಂಬಂತೆ ಖಾಸಗೀಕರಣ ರೂಪದಲ್ಲಿ ಪರಿವರ್ತನೆ ಮಾಡಿಕೊಂಡು ಹಳ್ಳಿ ಗಾಡಿನ ಮಾರ್ಗಗಳನ್ನು ರದ್ದು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕೋಲಾರ ವಿಭಾಗದ ಉನ್ನತ ಅಧಿಕಾರಿಗಳು ತಮ್ಮ ಪ್ರತಿಷ್ಠೆಗೋಸ್ಕರ ಹೆಚ್ಚುವರಿ ಮಾರ್ಗಗಳಲ್ಲಿ ದುಡಿಯುವ ನೌಕರರಿಗೆ ಹಾಗೂ ರಾತ್ರಿ ಪಾಳಿ ಮಾರ್ಗಗಳ ಓಟಿಯನ್ನು (ತಿಂಗಳುವಾರು ಸರಾಸರಿ ಒಬ್ಬ ನೌಕರನಿಂದ 10 ರಿಂದ 15 ಸಾವಿರ ರೂ.ಗಳು) ಸಂಪೂರ್ಣವಾಗಿ ಕೊಡದೆ ನೌಕರರಿಂದ ಬಿಟ್ಟಿಯಾಗಿ ದುಡಿಸಿಕೊಳ್ಳುತ್ತಿದ್ದಾರೆ.

ನೌಕರರಿಗೆ ಕೊಡಬೇಕಿರುವ ಓಟಿ ವೇತನವನ್ನು ಕೊಡದೆ ಯಾಮಾರಿಸಿಕೊಂಡು ಬರುತ್ತಿದ್ದು, ಏಕೆ ಹೀಗೆ ಮಾಡುತ್ತಿದ್ದೀರಿ ಎಂದು ಕೇಳುವ ನೌಕರರನ್ನು ಯಾವುದೋ ಕಾರಣ ನೀಡಿ ಅಮಾನತು ಮಾಡುವ ಕಾಯಕವನ್ನು ಅಳವಡಿಸಿಕೊಂಡಿದ್ದು, ಇತ್ತ ಅಮಾನತಾದ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವುದಕ್ಕೆ ಮಧ್ಯವರ್ತಿಗಳನ್ನು ಬಿಟ್ಟು ಲಂಚ ಪೀಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಕಳೆದ ಮೂವತ್ತು ವರ್ಷಗಳಿಂದ ಸಂಸ್ಥೆಯಲ್ಲಿ ನಿರ್ವಾಹಕನಾಗಿ ದುಡಿಯುತ್ತಿರುವ ರಾಮಚಂದ್ರ ರೆಡ್ಡಿ (ಸೈಕಲ್‌ರೆಡ್ಡಿ) ಎಂಬುವರು ನಿಷ್ಠೆಯಿಂದ ದುಡಿಯುತ್ತಿದ್ದರೂ ಅವರಿಗೆ ಈವರೆಗೂ ಮುಂಬಡ್ತಿ ನೀಡಿಲ್ಲ. ಕಾರಣ ಟಿಸಿಯಾಗಿ ಮುಂಬಡ್ತಿ ನೀಡಬೇಕು ಎಂದರೆ 50 ಸಾವಿರ ರೂ. ಲಂಚ ಕೊಡಬೇಕಂತೆ.

ಈ ರಾಮಚಂದ್ರ ರೆಡ್ಡಿ ಅವರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಕರ್ತವ್ಯ ನಿಷ್ಠೆಗೆ ನಿಗಮದಿಂದ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. ಇಂಥ ನೌಕರರಿಗೆ ಈವರೆಗೂ ಮುಂಬಡ್ತಿ ನೀಡಿಲ್ಲ. ಕೇಳಿದರೆ ವಿಭಾಗೀಯ ಮಟ್ಟದ ಅಧಿಕಾರಿಗಳು ಏನಾದರೂ ಒಂದು ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ಸ್ವತಃ ರಾಮಚಂದ್ರ ರೆಡ್ಡಿ ಅವರೇ ವಿಜಯಪಥಕ್ಕೆ ತಿಳಿಸಿದ್ದಾರೆ.

ಇನ್ನು ಮುಳಬಾಗಿಲು ಘಟಕದ ಜಾಲಹಳ್ಳಿ ಮಾರ್ಗದ ನಿರ್ವಾಹಕನಾಗಿದ್ದ ನಾನು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದು ನನ್ನ ಕಡೆಯಿಂದ 31 ತಿಂಗಳಲ್ಲಿ ಈ ಮಾರ್ಗದ ಆದಾಯ 75,30,626 ರೂ.ಗಳು ತಂದಿದ್ದೇವೆ. ನನ್ನರೀತಿಯಲ್ಲೇ ಈ ಮಾರ್ಗದ ಎಲ್ಲ ನೌಕರರು ಒಟ್ಟಾರೆ ಆದಾಯ ಸುಮಾರು 5 ಕೋಟಿ ರೂ ತಂದಿದ್ದೇವೆ.

ಇಂತಹ ಮಾರ್ಗದಲ್ಲಿ ನಾನು ಮಾಡಿದ ಓಟಿ (ಹೆಚ್ಚುವರಿ ಕೆಲಸದ ಹಣ) ಕೇಳಿದ್ದಕ್ಕೆ ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಈ ಮಾರ್ಗ ಆರು ತಿಂಗಳ ರೊಟೇಷನ್ ಅವಧಿಯಲ್ಲಿ ಇನ್ನೂ ಎರಡೂವರೆ ತಿಂಗಳು ಇರುವಾಗಲೇ ಈ ಮಾರ್ಗವನ್ನೇ ಬೇರೆ ಘಟಕಕ್ಕೆ ವರ್ಗಾವಣೆ ಮಾಡಿದ್ದಾರೆ. ಅಲ್ಲದೆ ಇದರ ಜತೆಗೆ ಹೊಸನಾಡು ಎಂಬ ಇನ್ನೊಂದು ಮಾರ್ಗವನ್ನು ಕೆಜಿಎಫ್ ಘಟಕಕ್ಕೆ ವರ್ಗಾವಣೆ ಮಾಡುವ ಮೂಲಕ ಈ ಮಾರ್ಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 21 ನೌಕರರಿಗೆ ಸರಿಯಾದ ಡ್ಯೂಟಿ ಕೊಡದೆ ಬೀದಿ ಪಾಲು ಮಾಡಿದ್ದಾರೆ.

ಇನ್ನು 600 ಕಿಮೀ ಡ್ಯೂಟಿ ಮಾಡುವ ಜಾಗದಲ್ಲಿ ಹೆಚ್ಚುವರಿಯಾಗಿ 600 ಕಿಮೀ ಡ್ಯೂಟಿ ಮಾಡಿಸಿಕೊಂಡು ಅಂದರೆ 1200 ಕಿಮೀ ಡ್ಯೂಟಿ ಮಾಡಿಸಿಕೊಳ್ಳುತ್ತಿದ್ದಾರೆ. ಇನ್ನು ಹೆಚ್ಚುವರಿ ಸಮಯ ಡ್ಯೂಟಿ ಮಾಡಿದ್ದ ಓಟಿ ಹಣ ಕೊಡದೆ ಬರಿ ಡ್ಯೂಟಿ ಲೆಕ್ಕದಲ್ಲಿ ವೇತನ ಕೊಡುತ್ತಿದ್ದಾರೆ. ಇಷ್ಟಕ್ಕೇ ಇವರ ಕುತಂತ್ರ ನಿಲ್ಲದೆ ಮುಂದುವರಿದಿದ್ದು, ಮುಳಬಾಗಿಲು ಘಟಕಕ್ಕೆ ಆದಾಯ ಬಾರದೆ ಮತ್ತು ನೌಕರರು ಡ್ಯೂಟಿ ಮಾಡಲು ಕಷ್ಟವಾಗುವಂತಹ ಎರಡು ಹಗಲು ಮಾರ್ಗಗಳನ್ನು ಸೃಷ್ಟಿಸಿ ದರ್ಪ ಮೆರೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸರ್ಕಾರದ ಅಧೀನದಲ್ಲಿರುವ ಕೆಎಸ್‌ಆರ್‌ಟಿಸಿ ಸಂಸ್ಥೆಯ ಕೋಲಾರ ವಿಭಾಗದಲ್ಲಿ ಅಧಿಕಾರಿಗಳ ಈ ಕಿರುಕುಳದಿಂದ ಮುಳಬಾಗಿಲು ಘಟಕ ದುಡಿಯುತ್ತಿರುವ ನೌಕರರು ಪ್ರಸ್ತುತ 12 ತಾಸು ಡ್ಯೂಡಿ ಮಾಡಿದರೂ ಕೂಡ 8 ಗಂಟೆಯ ಸಂಬಳ ಪಡೆಯುತ್ತಿದ್ದಾರೆ. ಉಳಿದ 4 ಗಂಟೆ ಓಟಿ ಹಣವನ್ನೇ ಈವರೆಗೂ ಕೊಟ್ಟಿಲ್ಲ.

ಇದರಿಂದ ಚಾಲನಾ ಸಿಬ್ಬಂದಿ ಕಷ್ಟದ ಜೀವನ ನಡೆಸುತ್ತಿದ್ದು, ಯಾರಾದರೂ ಈ ಬಗ್ಗೆ ಮಾತನಾಡಿದರೆ ಅವರ ವಿರುದ್ಧ ಘಟಕದ ಎಟಿಐ ಅವರು ಡಿಟಿಒಗೆ ದೂರು ನೀಡಿ ಅಧಿಕಾರ ದರ್ಪದಿಂದ ಮಾರ್ಗ ಬದಲಾವಣೆಯ ಬೆದರಿಕೆ ಮತ್ತು ಮಾರ್ಗದಲ್ಲಿ ಹೇಳಿದಷ್ಟು ಆದಾಯ ತರಲಿಲ್ಲವೆಂದು ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ.

ಈ ಬಗ್ಗೆ ಎಟಿಐ ಅವರನ್ನು ಕೇಳಿದರೆ ಅವರು ಘಟಕ ವ್ಯವಸ್ಥಾಪಕರು ಮತ್ತು ಸಂಚಲನಾಧಿಕಾರಿಗಳ ಅನುಮತಿ ಮೇರೆಗೆ ಮಾಡಿದ್ದೇನೆ, ಇದರಲ್ಲಿ ನನ್ನದೇನಿಲ್ಲವೆಂದು ಹೇಳುವ ಮೂಲಕ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳ ಈ ನಡೆಯಿಂದ ಮುಳಬಾಗಿಲು ಘಟಕದಲ್ಲಿ ನಿಷ್ಠಾವಂತ ನೌಕರರು ಅನುಭವಿಸುತ್ತಿರುವ ಕಷ್ಟಗಳಿಗೆ ಕೇಂದ್ರ ಸ್ಥಾನದಲ್ಲಿರುವ ಅಧಿಕಾರಿಗಳು ಮತ್ತು ಸಾರಿಗೆ ಸಚಿವರು ಸ್ಪಂದಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ರಾಮಚಂದ್ರ ರೆಡ್ಡಿ ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು