NEWSನಮ್ಮಜಿಲ್ಲೆನಮ್ಮರಾಜ್ಯ

ಮೇಯರ್‌ ಚುನಾವಣೆ: ಸುಪ್ರೀಂ ಕೋರ್ಟ್‌ ತೀರ್ಪು ಐತಿಹಾಸಿಕ, ಪ್ರಜಾಪ್ರಭುತ್ವಕ್ಕೆ ಸಿಕ್ಕ ದೊಡ್ಡ ಗೆಲುವು – ಮುಖ್ಯಮಂತ್ರಿ ಚಂದ್ರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಚಂಡೀಗಢ ಮೇಯರ್‌ ಚುನಾವಣೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ತೀರ್ಪು ಕೇವಲ ಚಂಡೀಗಢ ನಿವಾಸಿಗಳಿಗೆ ಸಿಕ್ಕಿದ ಗೆಲುವಲ್ಲ, ಭಾರತಕ್ಕೆ ಸಂದ ಗೆಲುವಾಗಿದೆ. ಪ್ರಜಾಪ್ರಭುತ್ವಕ್ಕೆ ಸಿಕ್ಕಿದ ವಿಜಯವಾಗಿದೆ. ಇದೊಂದು ಐತಿಹಾಸಿಕ ತೀರ್ಪು. ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಸಮಸ್ತ ಭಾರತೀಯರ ಗೆಲುವಾಗಿದೆ ಎಂದು ಎಎಪಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಸಂತಸ ವ್ಯಕ್ತಪಡಿಸಿದ್ದಾರೆ.

ಚುನಾವಣಾಧಿಕಾರಿ ಅನಿಲ್‌ ಮಸೀಹ್‌ ಅವರು 8 ಮತಪತ್ರಗಳನ್ನು ಉದ್ದೇಶಪೂರ್ವಕವಾಗಿ ವಿರೂಪಗೊಳಿಸಿ ಅಕ್ರಮ ಎಸಗಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿಗೆ ಸಂಬಂಧಿಸಿಂತೆ ನಗರದಲ್ಲಿ ಬುಧವಾರ ಸುದ್ದಿಗಾರರಿಗೆ ಮುಖ್ಯಮಂತ್ರಿ ಚಂದ್ರು ಪ್ರತಿಕ್ರಿಯಿಸಿದರು.

ಚುನಾವಣಾ ಅಕ್ರಮ ಎಸಗಿ ಸಿಕ್ಕಿಬಿದ್ದಿರುವ ಅನಿಲ್‌ ಮಸೀಹ್‌ ಹಿಂದೆ ಯಾರಿದ್ದಾರೆ ಎಂಬುದನ್ನು ತನಿಖೆ ನಡೆಸಬೇಕು. ಯಾರ ಅಣತಿಯ ಮೇರೆಗೆ ಮತಪತ್ರಗಳನ್ನು ವಿರೂಪಗೊಳಿಸಿದರು ಎಂಬುದನ್ನು ಪತ್ತೆ ಹಚ್ಚಬೇಕು. ಅನಿಲ್‌ ಮಸೀಹ್‌ನಂತವರು ಸಣ್ಣ ಸಣ್ಣ ಮೀನುಗಳಷ್ಟೇ. ಈ ಅಕ್ರಮದ ಹಿಂದಿರುವ ದೊಡ್ಡ ದೊಡ್ಡ ತಿಮಿಂಗಿಲಗಳನ್ನು ಬಡಿದು ಹೊರಗೆಳೆಯಬೇಕು ಎಂದು ಒತ್ತಾಯಿಸಿದರು.

ಎಎಪಿ ಕಾರ್ಪೊರೇಟರ್‌ ಕುಲದೀಪ್‌ ಕುಮಾರ್‌ ಅವರು ಚಂಡೀಗಢ ಮೇಯರ್‌ ಹುದ್ದೆಗೆ ಆಯ್ಕೆ ಆಗಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಘೋಷಣೆ ಮಾಡಿದೆ. ಸತ್ಯಕ್ಕೆ ಕಡೆಗೂ ಗೆಲುವು ಲಭಿಸಿದೆ. ಚುನಾವಣಾ ಅಕ್ರಮದಲ್ಲಿ ತೊಡಗಿರುವ ನಿರಂಕುಶ ಪ್ರಭುತ್ವವನ್ನು ಹಿಮ್ಮೆಟ್ಟಿಸಿ, ಸಂಕಷ್ಟ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಪ್ರಜಾಪ್ರಭುತ್ವವನ್ನು ರಕ್ಷಿಸಿದೆ ಎಂದರು.

ಇನ್ನು ಚಂಡೀಗಢದ ಚುನಾವಣಾ ಅಕ್ರಮವು ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರು ಪ್ರಜಾಪ್ರಭುತ್ವವನ್ನು ನಾಶಪಡಿಸುವ ಸಂಚಿನ ಒಂದು ಭಾಗವಷ್ಟೇ. ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ, ಅಧಿಕಾರಕ್ಕಾಗಿ ಮೋದಿ-ಶಾ ಜೋಡಿ ಏನು ಬೇಕಿದ್ದರೂ ಮಾಡುತ್ತಾರೆ ಎಂಬುದು ಪದೇಪದೆ ರುಜುವಾತಾಗುತ್ತಿದೆ ಎಂದು ಹೇಳಿದರು.

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಅನಿಲ್‌ ಮಸೀಹ್‌ ಅವರು ಮತಪತ್ರಗಳನ್ನು ವಿರೂಪಗೊಳಿಸುತ್ತಿರುವ ವಿಡಿಯೋ ನೋಡಿದ ಜನರಿಗೆ ಚುನಾವಣೆ ವ್ಯವಸ್ಥೆಯ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಮತದಾನದ ಸಂದರ್ಭ ನಾವು ಒತ್ತುವ ಬಟನ್‌ ನಾವು ಆಯ್ಕೆ ಮಾಡಿದ ಅಭ್ಯರ್ಥಿಗೆ ನಿಜಕ್ಕೂ ತಲುಪುತ್ತದೆಯೇ ಎಂಬ ಶಂಕೆ ಕಾಡುತ್ತಿದೆ.

ಈಗಾಗಲೇ ಎಲ್ಲೆಡೆ ಇವಿಎಂ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮೊದಲಿನ ಮತಪತ್ರ ಎಣಿಕೆಯ ವ್ಯವಸ್ಥೆ ಬಂದಲ್ಲಿ ಸಿಸಿಟಿವಿ ಕಣ್ಗಾವಲಿನಿಂದ ಅಕ್ರಮವನ್ನು ಪತ್ತೆ ಹಚ್ಚಬಹುದು. ಆದರೆ ಯಂತ್ರಗಳನ್ನು ಹ್ಯಾಕ್‌ ಮಾಡಿ ಅಕ್ರಮ ಎಸಗಿದರೆ, ಚುನಾವಣಾ ಅಧಿಕಾರಿಗಳೇ ಭಾಗಿಯಾಗಿದ್ದರೆ ಪತ್ತೆ ಹಚ್ಚುವುದು ಹೇಗೆ ಎಂದು ಚಂದ್ರು ಪ್ರಶ್ನಿಸಿದರು.

ಇತ್ತೀಚೆಗೆ ಸುಪ್ರೀಂ ಕೋರ್ಟ್‌ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡುವುದು ಅಸಾಂವಿಧಾನಿಕ ಎಂದು ತೀರ್ಪು ನೀಡಿದೆ. ಇದು ಸಂವಿಧಾನದ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಹಿತಿಯ ಹಕ್ಕಿಗೆ ವಿರುದ್ಧವಾದುದು ಎಂದು ಹೇಳಿದೆ. ಚುನಾವಣಾ ಪ್ರಜಾತಂತ್ರದ ಮೂಲಭೂತ ಜನಾದೇಶವು ಜಾರಿಯಾಗುವಂತೆ ನೋಡಿಕೊಳ್ಳುವ ಸಲುವಾಗಿ ನ್ಯಾಯಾಲಯಗಳು ಮಧ್ಯಪ್ರವೇಶಿಸುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ