ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದೊಡ್ಡಗಟ್ಟಗನಬ್ಬೇ ಗ್ರಾಮ ಪಂಚಾಯ್ತಿಯ ಜಿನ್ನಾಗರ ಹೊರವಲಯದಲ್ಲಿನ ಪ್ಲಾಸ್ಟಿಕ್ ಸಂಗ್ರಹಣಾ ಕೇಂದ್ರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಿಂಗಡಣೆಯಲ್ಲಿ ತೊಡಗಿದ್ದ ಐವರು ಬಾಲಕಾರ್ಮಿಕರನ್ನು ಅಧಿಕಾರಿಗಳು ರಕ್ಷಿಸಿದ್ದಾರೆ.
ಬಾಲಕಾರ್ಮಿಕರನ್ನು ಪ್ಲಾಸ್ಟಿಕ್ ತ್ಯಾಜ್ಯ ವಿಂಗಡಣೆಯಲ್ಲಿ ದುಡಿಸಿಕೊಳ್ಳುತ್ತಿರುವುದಾಗಿ ಬಂದ ದೂರಿನ ಮೇರೆಗೆ ಕಾಮಿ೯ಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಶಿಕ್ಷಣ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರ್‌ಗಳ ಇಲಾಖೆ, ಪೊಲೀಸ್ ಮತ್ತು ಮಕ್ಕಳ ಸಹಾಯವಾಣಿ ಜಂಟಿಯಾಗಿ ದಾಳಿ ನಡೆಸಿ 5 ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ.
ರಕ್ಷಿಸಲಾದ ಬಾಲ ಕಾರ್ಮಿಕರನ್ನು ತಾತ್ಕಾಲಿಕ ಪುನರ್ವಸತಿಗಾಗಿ ಸರ್ವೋದಯ ಸರ್ವೀಸ್ ಸೊಸೈಟಿ ಹಾಗೂ ಸ್ನೇಹ ಭಾರತಿ ಶಿಕ್ಷಣ ಸಂಸ್ಥೆಯ ತೆರೆದ ಮಕ್ಕಳ ತಂಗುದಾಣದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾ ಕಾರ್ಯಾಚರಣೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗೇಂದ್ರ ಎಚ್.ಆರ್, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಸುಬ್ಬರಾವ್ ಎಸ್, ಕಾರ್ಮಿಕ ನಿರೀಕ್ಷಕ ಯತೀಶ ಕುಮಾರ್, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ನಂಜಪ್ಪ, ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಸಂಯೋಜಕರಾದ ವಿಜಯಲಕ್ಷ್ಮಿ, ಜಿನ್ನಾಗರ ಶಾಲೆಯ ಮುಖ್ಯೋಪಾಧ್ಯಾಯರಾದ ವಿಜಯ, ಅಂಗನವಾಡಿ ಶಿಕ್ಷಕಿ ರೇಣುಕಾ ಹಾಗೂ ಮಕ್ಕಳ ಸಹಾಯವಾಣಿಯ ಸಿಬ್ಬಂದಿಗಳಾದ ಶಶಿಕುಮಾರ್ ಹಾಗೂ ನರಸಿಂಹ ರಾಜು ಇದ್ದರು.