ಬೆಂಗಳೂರು: ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಇದೇ ಏ.14 ರಂದು ಬೆಳಗ್ಗೆ 10 ಗಂಟೆಗೆ ಒಕ್ಕಲಿಗ ಯುವ ಬ್ರಿಗೇಡ್ ಹಾಗೂ NRI ಒಕ್ಕಲಿಗ ಯುವ ಬ್ರಿ ಗೇಡ್ ಸಾಮಾಜಿಕ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ 2 ನೇ ಮುಖ್ಯ ರಸ್ತೆ, ಅರಮನೆ ಗುಟ್ಟಹಳ್ಳಿ (ವಿನಾಯಕ ವೃತ್ತದ ಹತ್ತಿರ) ಇರುವ ಬಿಲ್ವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ನಂ. 21 ಮತ್ತು 22ರಲ್ಲಿ ಉಚಿತ ಅರೋಗ್ಯ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಎಂದು ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ತಿಳಿಸಿದ್ದಾರೆ.
ಇನ್ನು ಶಿಬರದಲ್ಲಿ ಸಾಮಾನ್ಯ ವೈದ್ಯಕೀಯ ಪರೀಕ್ಷೆ, ದಂತ ಪರೀಕ್ಷೆ, ನರ ಮತ್ತು ಮಾನಸಿಕ, ಮಕ್ಕಳಿಗೆ ಸಂಬಂಧಿಸಿದ, ಚರ್ಮ, ಸ್ತ್ರೀರೋಗ, ಮೂಳೆಗೆ ಸಂಬಂಧಿಸಿದಂತೆ ಎಲ್ಲ ವಿಭಾಗದ ತಜ್ಞ ವೈದ್ಯರಿಂದ ಉಚಿತವಾಗಿ ತಪಾಸಣೆ ಮಾಡಲಾಗುತ್ತದೆ.
ಹೀಗಾಗಿ ಇದರ ಸದುಪಯೋಗನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು, ಅದರಲ್ಲೂ ಪ್ರಮುಖವಾಗಿ ರಸ್ತೆ ಬದಿ ವ್ಯಾಪಾರಿಗಳು, ಪೌರಕಾರ್ಮಿಕರು, ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶಿವರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಂಜೇಗೌಡ ನಂಜುಂಡ ಮನವಿ ಮಾಡಿದ್ದಾರೆ.
ಒಕ್ಕಲಿಗ ಯುವ ಬ್ರಿಗೇಡ್ ಬಗ್ಗೆ: ಸರಿ ಸುಮಾರು 18 ದೇಶಗಳಲ್ಲಿ ಯುವಕರಿಗೆ ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬಂಧಿಸದಂತೆ ಸಲಹೆ, ಸಹಕಾರ ನೀಡುತ್ತ ಬಂದಿದ್ದು, 2023 ನೇ ಸಾಲಿನಲ್ಲಿ ಸುಮಾರು 3 ಸಾವಿರ ಯುವಕರಿಗೆ ಉಚಿತವಾಗಿ ಉದ್ಯೋಗವಕಾಶ ಕಲ್ಪಿಸಿಕೊಟ್ಟಿದೆ.
ಸುಮಾರು 150 ಮಕ್ಕಳ ಉನ್ನತ ಶಿಕ್ಷಣಕ್ಕೆ ದಾರಿ ಮಾಡಿಕೊಟ್ಟಿದೆ. ಬೆಂಗಳೂರು, ಮೈಸೂರಿನಲ್ಲಿ ಉಚಿತ ಉದ್ಯೋಗ ಮೇಳವನ್ನು ಹಮ್ಮಿಕೊಂಡು ಗ್ರಾಮೀಣ ಭಾಗದ ಮಕ್ಕಳಿಗೆ ಉದ್ಯೋಗ ಕೊಡಿಸುವ ಕೆಲಸವನ್ನು ಮಾಡುತ್ತ ಬಂದಿದೆ.
ಇನ್ನು 2024 ರಲ್ಲೂ ಕೂಡ 4 ಸಾವಿರ ಯುವಕರಿಗೆ ಉದ್ಯೋಗ ಕೊಡಿಸುವ ಗುರಿ ಇಟ್ಟಿಕೊಂಡು ಈಗಾಗಲೇ ಜನವರಿಯಲ್ಲಿ ತುಮಕೂರಿನಲ್ಲಿ ಉದ್ಯೋಗಮೇಳ ಹಮ್ಮಿಕೊಂಡು ಸುಮಾರು 750 ಯುವಕರಿಗೆ ಉದ್ಯೋಗ ಕೊಡಿಸಲಾಗಿದೆ.
ಈ ನಡುವೆ ಮುಂದಿನ ಉದ್ಯೋಗಮೇಳವನ್ನು ಮೈಸೂರು ಜಿಲ್ಲೆಯ ಪಿರಿಯಾಪಟಣದಲ್ಲಿ ಬರುವ ಜುಲೈನಲ್ಲಿ ಹಮ್ಮಿಕೊಳ್ಳಲಾಗುವುದು. ಈ ವರ್ಷವೂ ಕೂಡ ಸುಮಾರು 200 ಬಡ ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಮಾಡುವ ಗುರಿ ಇಟ್ಟುಕೊಂಡು ಈಗಾಗಲೇ 65 ಮಕ್ಕಳಿಗೆ ಸಹಾಯವನ್ನು ಮಾಡಲಾಗಿದೆ.