ವಿಶ್ವದಾದ್ಯಂತ ಕೊರೋನಾ ವೈರಸ್(ಕೋವಿಡ್-19) ಸೋಂಕು ವಿಪರೀತಕ್ಕೇರುತ್ತಿದ್ದು, ಅಸಂಖ್ಯಾತ ಜನರು ಸಾವನ್ನಪ್ಪುತ್ತಿದ್ದಾರೆ. ರೋಗವನ್ನು ನಿಯಂತ್ರಿಸಲು ಸರ್ಕಾರಗಳು ಹಗಲಿರುಳು ಶ್ರಮಿಸುತ್ತಿವೆ. ಎಲ್ಲ ಜವಾಬ್ದಾರಿಯನ್ನು ಸರ್ಕಾರಗಳ ಮೇಲೆ ಹೊರಿಸದೆ ನಾವೂ ಸಹ ಸಾಮಾಜಿಕ ಜವಾಬ್ದಾರಿಯನ್ನರಿತು ಸರ್ಕಾರದೊಂದಿಗೆ ಕೈಜೋಡಿಸಿ ಕೊರೋನಾ ವೈರಸ್ ಅನ್ನು ನಿರ್ನಾಮ ಮಾಡುವ ಪಣ ತೊಡಬೇಕು.
ಹಣ್ಣು-ತರಕಾರಿ ಸೇವನೆಯಿಂದ ರೋಗನಿರೋಧಕ ಶಕ್ತಿ
ವಾಸ್ತವವಾಗಿ ಈ ಮಹಾಮಾರಿ ರೋಗವನ್ನು ತಡೆಗಟ್ಟುವ ಲಸಿಕೆಯಾಗಲೀ, ನಿರ್ದಿಷ್ಟವಾಗಿ ಗುಣಪಡಿಸುವ ವೈಜ್ಞಾನಿಕವಾಗಿ ಸಿದ್ಧಪಡಿಸಿದ ಔಷಧಗಳಾಗಲೀ ಯಾವುದೇ ವೈದ್ಯಪದ್ಧತಿಗಳಲ್ಲಿರುವುದಿಲ್ಲ. ನಮ್ಮಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರಿಂದ ಕರೋನಾ ವೈರಸ್ ಎಂಬ ಮಾರಣಾಂತಿಕ ಕಾಯಿಲೆಯಿಂದ ದೂರವಿರಬಹುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸೋಂಕಿತರಿಂದ ದೂರವಿರುವುದು, ಮಾಸ್ಕ್ ಧರಿಸುವುದು, ದೂರ ಪ್ರಯಾಣ ಮಾಡದಿರುವುದರೊಂದಿಗೆ ಹೆಚ್ಚೆಚ್ಚು ಹಣ್ಣು-ತರಕಾರಿಯನ್ನು ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಕೊಳ್ಳುವುದರಿಂದಲೂ ಈ ವೈರಸ್ ನಿಯಂತ್ರಣ ಸಾಧ್ಯವೆಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
ಆಹಾರ ಮತ್ತು ಕೃಷಿ ಸಂಸ್ಥೆ ಅಭಿಮತ
ಅಲ್ಲದೆ ಹೆಚ್ಚು ಹಣ್ಣು-ತರಕಾರಿ ಸೇವನೆಯಿಂದ ಕರೋನಾ ವೈರಸ್ ಅನ್ನು ದೂರವಿಡಬಹುದೆಂದು ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಸ್ಥೆಯು ೨೦೨೦ರ ಮಾರ್ಚ್ 27ರಂದು ಬಿಡುಗಡೆ ಮಾಡಿರುವ ತನ್ನ 1.12 ನಿಮಿಷ ಅವಧಿಯ ವಿಡಿಯೋ ಕ್ಲಿಪ್ಪಿಂಗ್ನಲ್ಲಿ ಹೇಳಿಕೆ ನೀಡಿದೆ. ದಿನಕ್ಕೆ ಐದು ಬಾರಿ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದೆಂದು ಈ ಕ್ಲಿಪ್ಪಿಂಗ್ನಲ್ಲಿ ಅಭಿಮತಿಸಿದೆ.
ಉಳಿತಾಯದ ಹಣದಲ್ಲಿ ಹಣ್ಣು-ತರಕಾರಿ ಖರೀದಿಸಿ
ಕೋವಿಡ್-19ರ ವಿರುದ್ಧ ಹೋರಾಡಲು ನಮ್ಮಲ್ಲಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದೇ ಪರಮೌಷಧ ಎಂಬುದು ಜಾಗತಿಕವಾಗಿ ತಿಳಿದಿರುವ ವಿಷಯ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಜನರು ದಿನನಿತ್ಯ ಸೇವಿಸುತ್ತಿದ್ದ ಹಣ್ಣು-ತರಕಾರಿಗಿಂತ ಮೂರು ಪಟ್ಟು ಹೆಚ್ಚು ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಲಾಕ್ಡೌನ್ ಸಂದರ್ಭದಲ್ಲಿ ಪ್ರಸ್ತುತ ಉಳಿತಾಯವಾಗುತ್ತಿರುವ ಪೆಟ್ರೋಲ್ ಮತ್ತು ಹೋಟೆಲ್ ಖರ್ಚಿನಲ್ಲಿ ಹಣ್ಣು-ತರಕಾರಿಯನ್ನು ಖರೀದಿಸಿ ಸೇವಿಸಬಹುದು.
ಮೂರು ಪಟ್ಟು ಸೇವಿಸಿ-ರೈತರಿಗೆ ನೆರವಾಗಿ
ನಾಲ್ಕು ಮಂದಿ ಇರುವ ಒಂದು ಕುಟುಂಬವು ಸಾಮಾನ್ಯ ದಿನಗಳಲ್ಲಿ ವಾರಕ್ಕೆ 5 ಕೆ.ಜಿ ತರಕಾರಿಗಳನ್ನು ಖರೀದಿಸುತ್ತಿದ್ದರೆ, ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ 15 ಕೆ.ಜಿ ಖರೀದಿಸಿ. ವಾರಕ್ಕೆ 3 ಕೆ.ಜಿ ಹಣ್ಣುಗಳನ್ನು ತಿನ್ನುತ್ತಿದ್ದಲ್ಲಿ, 9 ಕೆ.ಜಿ ಹಣ್ಣುಗಳನ್ನು ಖರೀದಿಸಿ. ಇದರಿಂದ ತೋಟಗಾರಿಕೆ ಇಲಾಖೆ/ಹಾಪ್ಕಾಮ್ಸ್ ಮಳಿಗೆಗಳ ಮೂಲಕ ರೈತರಿಂದ ನೇರವಾಗಿ ಖರೀದಿಸುತ್ತಿರುವ ಸರಕಾರಕ್ಕೂ ನೆರವಾದಂತಾಗುತ್ತದೆ. ಅಲ್ಲದೆ ಬೆಳೆನಷ್ಟ ಹೊಂದಿ ಸಂಭವಿಸಬಹುದಾದ ರೈತರ ಆತ್ಮಹತ್ಯೆಗಳನ್ನೂ ತಡೆಯಬಹುದಾಗಿದೆ.
ಸರ್ಕಾರದಿಂದ ಅಗ್ರಿವಾರ್ ರೂಮ್
ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯದ ರೈತರ ಹಿತರಕ್ಷಣೆಗಾಗಿ ಸರ್ಕಾರವು ಸಹ ಅಗ್ರಿ ವಾರ್ ರೂಮ್ ಕಾರ್ಯನಿರ್ವಹಣೆಯನ್ನು ಪ್ರಾರಂಭಿಸಿದೆ. ರೈತ ಬೆಳೆದ ಹಣ್ಣು-ತರಕಾರಿಗಳನ್ನು ಮಾರಾಟ ಮಾಡಲು ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ತೆರೆಯಲಾಗಿದೆ. ಕೃಷಿ ಉತ್ಪನ್ನಗಳನ್ನು ಸಾಗಾಣಿಕೆ ಮಾಡಲು ಅಡ್ಡಿ ಉಂಟು ಮಾಡದಿರಲು ಪೊಲೀಸರಿಗೂ ಸಹ ಸೂಚನೆ ನೀಡಿದೆ. ರೈಲು ಮುಖಾಂತರ ಹೊರ ರಾಜ್ಯಗಳಿಗೆ ಹಣ್ಣು-ತರಕಾರಿ ಸಾಗಾಟ ಮಾಡುವ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಹಣ್ಣು-ತರಕಾರಿಯನ್ನು ಹೆಚ್ಚುವರಿಯಾಗಿ ಖರೀದಿಸಲು ಹಾಪ್ ಕಾಮ್ಸ್ ಸೂಚನೆ ನೀಡಿದೆ. ಟೊಮ್ಯಾಟೋ ಕೆಚಪ್, ಅಕ್ಕಿಗಿರಣಿ, ತೊಗರಿ ಮಿಲ್, ರೇಷ್ಮೆ ಮಾರುಕಟ್ಟೆ ತೆರೆಯಲು ಈಗಾಗಲೇ ಆದೇಶ ನೀಡಿದ್ದು, ಮಾರುಕಟ್ಟೆ ಸಮಸ್ಯೆಗೆ ಸಿಲುಕಿದ ರೈತರು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ೦೮೦-೨೨೨೧೦೨೩೭ ಅನ್ನು ಸಂಪರ್ಕಿಸಬಹುದಾಗಿದೆ.
ಬೆಳೆನಷ್ಟದ ಕಾರಣದಿಂದಾಗಿ ರೈತರು ಬೇಸಾಯದಲ್ಲಿ ಆಸಕ್ತಿಯನ್ನು ಕಳೆದುಕೊಂಡಲ್ಲಿ ಭವಿಷ್ಯದಲ್ಲಿ ನಾವೆಲ್ಲರೂ ಹಣ್ಣು-ತರಕಾರಿಗಳ ಕೊರತೆ ಅಥವಾ ದುಬಾರಿ ಬೆಲೆ ತೆರಬೇಕಾದ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಲಾಕ್ಡೌನ್ನ ಕಷ್ಟಕರ ಸಮಯದಲ್ಲಿ ದೇಶದ ಬೆನ್ನೆಲುಬಾದ ಅನ್ನದಾತ ರೈತಸಮುದಾಯಕ್ಕೆ ನೆರವಾಗೋಣ. ನಮ್ಮನ್ನು ಕೊರೋನಾ ವೈರಸ್ನಿಂದ ರಕ್ಷಿಸಿಕೊಳ್ಳಲು ಹೆಚ್ಚೆಚ್ಚು ಹಣ್ಣು-ತರಕಾರಿಗಳನ್ನು ಸೇವಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಪ್ರತಿಜ್ಞೆಯನ್ನು ಸ್ವೀಕರಿಸೋಣ ಎಂದು ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಲೋಗಾನಂದನ್ ಹಾಗೂ ತುಮಕೂರಿನ ಸ್ಪಿರುಲಿನಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಇಡಿ. ಮಹೇಶ್ R V (Biotechnology) ಅವರು ಸಲಹೆ ನೀಡಿದ್ದಾರೆ.
l ಆರ್.ರೂಪಕಲಾ ವಾರ್ತಾ ಇಲಾಖೆ, ತುಮಕೂರು