ಮೈಸೂರು: ಬೇಸಿಗೆಯ ಬಿರು ಬೇಸಿಲಿನ ಧಗೆಯಿಂದ ಬಸವಳಿದಿದ್ದ ಜನ, ಜಾನುವಾರುಗಳಿಗೆ ಶುಕ್ರವಾರ ಸಂಜೆ ಸುರಿದ ಸುರಿದ ಮಳೆ ತಂಪೆರೆದಿದೆ.
ಕಳೆದ ಐದಾರು ತಿಂಗಳಿಂದ ಬೇಸಿಗೆಯ ರಣ ಬಿಸಿಲು ಹಾಗೂ ಬರಗಾಲದಿಂದ ತತ್ತರಿಸಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಏಪ್ರಿಲ್ 27 ರಂದು ಭರಣಿ ಮಳೆ ಹುಟ್ಟಿದ್ದು ರಾಜ್ಯದ ಹಲವೆಡೆ ಬಿಸಿಲ ಬೇಗೆಯಿಂದ ಬಸವಳಿದವರಿಗೆ ರಿಲೀಫ್ ನೀಡಿದೆ.
ಭರಣಿ ಮಳೆ ಭೂಮಿಗೆ ಬಿದ್ದರೆ ಪಿರಿಯಾಪಟ್ಟಣ ರೈತರು ತಮ್ಮ ಭೂಮಿಯನ್ನು ಹದ ಮಾಡಿಕೊಂಡು ತಂಬಾಕು ಹಾಗೂ ಮುಸುಕಿನ ಜೋಳದ ಬಿತ್ತನೆ ಕಾರ್ಯ ಹಾಗೂ ನಾಟಿ ಕೆಲಸ ಆರಂಭಿಸುತ್ತಾರೆ. ಅದೇರೀತಿ ಜಿಲ್ಲೆಯಲ್ಲಿ ಮಂದಿ ಹಲಸಂದೆ, ಜೋಳವನ್ನು ಬಿತ್ತನೆ ಮಾಡಲು ಸಿದ್ಧರಾಗುತ್ತಿದ್ದಾರೆ.
ಕಳೆದ ವರ್ಷ ಬರಗಾಲ ತಲೆದೋರಿದ ಪರಿಣಾಮ ತಾಲೂಕಿನಲ್ಲಿ ಐದಾರು ತಿಂಗಳಿಂದ ಬೇಸಿಗೆಯ ರಣ ಬಿಸಿಲು ಹೆಚ್ಚಾಗಿ ದಾಖಲೆಯ ಉಷ್ಣಾಂಶ ಎದುರಾಗಿ ಜನ ಜಾನುವಾರುಗಳು ಕುಡಿಯಲು ನೀರಿಲ್ಲದೆ ಕೆರೆಕಟ್ಟೆಗಳು ಒಣಗಿ ಹೋಗಿ, ಬೋರ್ವೆಲ್ಗಳು ಬತ್ತಿ ಹೋಗಿ ತೋಟ ತುಡಿಕೆಗಳು ಒಣಗಿ ಹೋಗಿ ರೈತರನ್ನು ಸಂಕಷ್ಟಕ್ಕೆ ತಳ್ಳಿವೆ.
ಆದರೆ ಶುಕ್ರವಾರ ಸಂಜೆ ಸುರಿದ ಭರಣಿ ಮಳೆಗೆ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಪಿರಿಯಾಪಟ್ಟಣ ಪಟ್ಟಣದ ಬಹುಭಾಗ ಸೇರಿದಂತೆ ತಾಲೂಕಿನ ಹಲವೆಡೆ ಗುಡುಗು ಸಹಿತ ಮಳೆ ಸುರಿದಿದೆ.
ರಭಸದ ಗಾಳಿ ಬೀಸಿದ ಪರಿಣಾಮ ವಿದ್ಯುತ್ ಕಂಬಗಳು ಸೇರಿದಂತೆ ಮರಗಳು ಧರೆಗುರುಳಿವೆ. ಕಳೆದ ಒಂದು ವಾರದಿಂದ ಪಿರಿಯಾಪಟ್ಟಣದಲ್ಲಿ ಉಷ್ಣಾಂಶ 37 ರಿಂದ 38 ಡಿಗ್ರಿ ಸೆಲ್ಸಿಯಸ್ ವರೆಗೂ ದಾಖಲಾಗಿತ್ತು. ಶುಕ್ರವಾರ ಸಂಜೆ ಗುಡುಗು, ಮಿಂಚು ಸಹಿತ ಮಳೆಯಾಗಿದ್ದು, ಮಳೆ ಬಂದರೂ ನೆನೆದುಕೊಂಡೆ ಜನ ಪ್ರಯಾಣಿಸಿದ ದೃಶ್ಯಗಳು ಕಂಡು ಬಂದವು.
ಸುರಿದ ಭರಣಿ ಮಳೆ ಕೃಷಿಕರಲ್ಲಿ ಉತ್ತಮ ಬೆಳೆ ಪಡೆಯುವ ಭರವಸೆ ಮೂಡಿಸಿವೆ. ರೈತರು ಮುಂಗಾರು ಉಳುಮೆ ಮತ್ತು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಕೃಷಿ ಇಲಾಖೆಯೂ ರೈತರಿಗೆ ರಿಯಾಯಿತಿ ದರದಲ್ಲಿ ಮುಸುಕಿನ ಜೋಳ ಸೇರಿದಂತೆ ದ್ವಿದಳ ಧಾನ್ಯಗಳು ಮತ್ತು ಬಿತ್ತನೆ ಬೀಜಗಳನ್ನು ಹಾಗೂ ರಸಗೊಬ್ಬರವನ್ನು ಪೂರೈಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಪಿರಿಯಾಪಟ್ಟಣ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ತಿಳಿಸಿದ್ದಾರೆ.