ತಿಪಟೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ತಿಪಟೂರು ಘಟಕ ವ್ಯವಸ್ಥಾಪಕರು ಚಾಲಕರು ಮತ್ತು ನಿರ್ವಾಹಕರು ಮತ್ತು ತಾಂತ್ರಿಕ ಸಿಬ್ಬಂದಿಯ ಮೇಲೆ ದೌರ್ಜನ್ಯ, ಏಕವಚನ ಪದ ಪ್ರಯೋಗ ಮಾಡುವ ಮೂಲಕ ಅಮಾನವೀಯತೆಯಿಂದ ನಡೆದುಕೊಳ್ಳುತ್ತಿದ್ದಾರೆ.
ತಿಪಟೂರು ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲನಾ ಸಿಬ್ಬಂದಿಗಳು ಕರ್ತವ್ಯದ ಮೇಲೆ ಹೋಗಿ ಬಂದರೂ ಘಟಕದಲ್ಲಿ ಇರುವ ಸಿಬ್ಬಂದಿ ಅವರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಇತ್ತ ಡಿಎಂ ಕೂಡ ನೌಕರರ ಸಮಸ್ಯೆ ಆಲಿಸುವ ಬದಲಿಗೆ ಅವರ ಮೇಲೆಯೇ ದರ್ಪ ಮೆರೆಯುತ್ತಿದ್ದಾರೆ ಎಂಬ ಅರೋಪ ಕೇಳಿ ಬಂದಿದೆ.
ಘಟಕದಲ್ಲಿ ಬಸ್ಗಳನ್ನು ದುರಸ್ತಿಗೊಳಿಸುವುದಕ್ಕೆ ಮಾತ್ರ ಮುಂದಾಗುವುದಿಲ್ಲ. ಈ ಬಗ್ಗೆ ಚಾಲಕ ನಿರ್ವಾಹಕರು ಕೇಳಿದರೆ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿ ಕಳುಹಿಸುತ್ತಾರೆ. ಯಾರೋ ಮಾಡಿದ ತಪ್ಪಿಗೆ ಇನ್ನಾರಿಗೂ ಮೆಮೋ ಕೊಡುತ್ತಿದ್ದಾರೆ ಎಂದು ನಿಷ್ಠಾವಂತ ನೌಕರರು ಆರೋಪಿಸಿದ್ದಾರೆ.
ಇನ್ನು ಇವರು ಬಾಯಿ ಬಿಟ್ಟರು ಎಂದರೆ ಚಾಲನಾ ಸಿಬ್ಬಂದಿಗಳಿಗೆ ಕೆಟ್ಟ ಪದಗಳ ಪ್ರಯೋಗವನ್ನೇ ಮಾಡುವುದು. ಇವರ ಸೊಂಟದ ಕೆಳಗಿನ ಬೈಗುಳಗಳಿಂದ ಘಟಕದ ನೌಕರರು ಬಹಳನೊಂದುಕೊಳ್ಳುತ್ತಿದ್ದಾರೆ.
ಘಟಕದಲ್ಲಿ ಎಕ್ಸ್ಪ್ರೆಸ್ ಅನುಸೂಚಿಗಳನ್ನು ಕಾರ್ಯಾಚರಣೆ ಮಾಡುತ್ತಿರುವಂತಹ ಚಾಲನಾ ಸಿಬ್ಬಂದಿಗಳು, ನೈಟ್ಹಾಲ್ಟ್ ಡ್ಯೂಟಿ ಮಾಡುವವರಿಗೆ ತುಂಬ ಕಿರಿಕಿರಿಯುಂಟು ಮಾಡುತ್ತಿದ್ದಾರೆ. ಬೇಕಾದವರಿಗೆ ಎಲ್ಲ ಸರಿ ಇರುವ ಬಸ್ಕೊಡುತ್ತಾರೆ, ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ದುರಸ್ತಿಗೊಳ್ಳುವ ಬಸ್ ಕೊಟ್ಟು ಡ್ಯೂಟಿ ಮಾಡಿಕೊಂಡು ಬರಬೇಕು ಎಂದು ತಾಕೀತು ಮಾಡುತ್ತಾರೆ.
ಅರ್ಧದಲ್ಲೇ ಬಸ್ ಕೆಟ್ಟು ನಿಂತರೆ ಅದನ್ನು ನಮ್ಮ ಮೇಲೆಯೇ ಹೊರಿಸುತ್ತಾರೆ. ಈ ರೀತಿ ನಮಗೆ ಕಿರುಕುಳ ಕೊಡುತ್ತಿರುವುದರಿಂದ ನಾವು ನೆಮ್ಮದಿಯಿಂದ ಕೆಲಸ ಮಾಡುವುದಕ್ಕೆ ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಇನ್ನು ನಿಗಮದ ಕೆಲ ಘಟಕಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಮೇಲಧಿಕಾರಿಗಳು ಕೆಳಹಂತದ ಅಧಿಕಾರಿಗಳಿಗೆ ತಿಂಗಳಿಗೆ ಇಂತಿಷ್ಟು ಎಂಬ ಸೂಟ್ಕೇಸ್ಸಂಸ್ಕೃತಿ ಅಳವಡಿಸಿಕೊಂಡಿದ್ದು, ಅದನ್ನು ಕೆಳಹಂತದ ಅಧಿಕಾರಿಗಳು ಕೇಳದಿದ್ದರೆ ಅವರನ್ನು ವರ್ಗಾವಣೆ ಇಲ್ಲ ಯಾವುದಾದರು ಒಂದು ಪ್ರಕರಣದಲ್ಲಿ ಸಿಲುಕಿಸಿ ಮಾನಸಿಕ ಹಿಂಸೆ ನೀಡುತ್ತಾರೆ.
ಈ ಮೇಲಧಿಕಾರಿಗಳ ಕಿರುಕುಳದಿಂದ ತಪ್ಪಿಸಿಕೊಳ್ಳಲು ಈ ಕೆಳಹಂತದ ಅಧಿಕಾರಿಗಳು ಚಾಲನಾ ಮತ್ತು ತಾಂತ್ರಿಕಾ ಸಿಬ್ಬಂದಿಯ ರಕ್ತಬಸಿಯಲು ಮುಂದಾಗುತ್ತಾರೆ. ಇಲ್ಲಿ ಕಷ್ಟಕ್ಕೆ ಸಿಲುಕಿಕೊಳ್ಳುವವರು ಈ ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳು ಮಾತ್ರ.
ಇನ್ನು ಸರಿಯಾಗಿ ಫಿಟ್ನೆಸ್ ಇರುವ ಬಸ್ಗಳನ್ನು ಕೊಡದೆ ಚಾಲನಾ ಸಿಬ್ಬಂದಿಯನ್ನು ನಿಂದಿಸುವುದು ಮಾಮೂಲಾಗಿದೆ. ಈ ಬಗ್ಗೆ ಕೇಳಬೇಕಾದ ಅಧಿಕಾರಿಗಳು ಜಾಣಮೌನ ಅನುಸರಿಸುತ್ತಿರುವುದು ಬಹಳ ನೋವಿನ ಸಂಗತಿ. ಇತ್ತ ಈ ಅರ್ಥದಲ್ಲೇ ಕೆಟ್ಟು ನಿಲ್ಲುವ ಬಸ್ಗಳನ್ನು ಮಾರ್ಗದ ಮೇಲೆ ಕಳುಹಿಸಿ ಅತ್ತ ಬಸ್ ಕೆಟ್ಟು ನಿಂತರೆ ಪ್ರಯಾಣಿಕರಿಗೆ ತೊಂದರೆ ಆಗಿದೆ ಏಕೆ ಎಂದು ಕಾರಣ ಕೇಳಿ ಮೆಮೋ ಕೊಡುವುದು ಇವರೆ.
ಹೀಗಾದರೆ ನಾವು ಕೆಲಸ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ ನೊಂದ ನೌಕರರು. ಈ ಬಗ್ಗೆ ಇನ್ನಾದರೂ ಘಟಕ ವ್ಯವಸ್ಥಾಪಕರು ನೌಕರರ ಬಗ್ಗೆ ಸೌಜನ್ಯದಿಂದ ನಡೆದುಕೊಳ್ಳುವ ಮೂಲಕ ಅವರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ.
ತುಮಕೂರು ವಿಭಾಗ ತಿಪಟೂರು ಘಟಕ ವ್ಯವಸ್ಥಾಪಕರು ತಮ್ಮ ಸಿಬ್ಬಂದಿಗಳ ಜೊತೆಗೆ ಅನಿಚುತಿತ್ವ ವರ್ತನೆ ಹಾಗೂ ಜಾತಿ ನಿಂದನೆ ಮತ್ತು ಅವಾಸ್ಯ ಶಬ್ದಗಳಿಂದ ನಿಂದನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ @KSRTC_Journeys @RLR_BTM @SWDGoK @bhattarahalli pic.twitter.com/YPty4mlQ8u
— Madhusudhan T S (@Madhuss311S) May 3, 2024