ಮೈಸೂರು: ರಾಜ್ಯದ 224 ತಾಲೂಕು ಬರಗಾಲ ಎಂದು ಸರ್ಕಾರ ಘೋಷಣೆ ಮಾಡಿದೆ. ಸುಮಾರು ಎಪ್ಪತ್ತು ಲಕ್ಷ ರೈತರು ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ 27 ಲಕ್ಷ ರೈತರಿಗೆ ಬರ ಪರಿಹಾರ ವಿತರಣೆ ಮಾಡುತ್ತಿದ್ದು, ಉಳಿದ 40 ಲಕ್ಷ ರೈತರಿಗೆ ಪರಿಹಾರ ಸಿಗುತ್ತಿಲ್ಲ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಬೇಸರ ಹೊರಹಾಕಿದ್ದಾರೆ.
ಇಂದು ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಹಾರ ಸಿಗದ ರೈತರು ಉತ್ತಮ ಮಳೆ ಬೆಳೆಯಾಗಿ ಲಾಭಗಳಿಸಿದ್ದಾರೆಯೇ, ಇವರಿಗೆ ಯಾಕೆ ಬರ ಪರಿಹಾರ ಇಲ್ಲ. ರಾಜ್ಯ ಸರ್ಕಾರವೇ ಉತ್ತರಿಸಬೇಕು, ಈಗ ಪರಿಹಾರ 2,000 ವಿತರಣೆ ಮಾಡಿದ್ದೇವೆ ಎನ್ನುತ್ತಾರೆ. ಅದರೆ 50ರಷ್ಟು ರೈತರಿಗೆ 500-600 ರೂ. ಬಂದಿದೆ. ಪ್ರತಿ ರೈತರಿಗೆ ಗರಿಷ್ಠ ಎರಡು ಹೆಕ್ಟರ್ ತನಕ ಪರಿಹಾರ ನೀಡಬಹುದು ಎಂಬ ಮಾನದಂಡವಿದೆ, ಸರ್ಕಾರ ರೈತರಿಗೆ ಚಳೆ ಹಣ್ಣು ತಿನ್ನಿಸುತ್ತಿದೆ ಎಂದು ಹೇಳಿದರು.
ರೈತ ದ್ರೋಹಿ ಈ ಕಾರ್ಯದ ವಿರುದ್ಧ ಮೇ 14ರಂದು ಸರ್ಕಾರವನ್ನು ಎಚ್ಚರಿಸಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಲಾಗುವುದು. ಇದೆ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಬಾಕಿ ರೂ.1500 ಕೋಟಿ ಹಾಗೂ ಹೆಚ್ಚುವರಿ ದರ 150 ರೂ. ಸಕ್ಕರೆ ಕಾರ್ಖಾನೆಗಳಿಂದ ಕೊಡಿಸುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಮೊನ್ನೆ ಬಂದ ಮಳೆ, ಗಾಳಿ ಅಬ್ಬರಕೆ. ಬಾಳೆ ಮಾವು ತರಕಾರಿ ಇನ್ನಿತರ ಬೆಳೆಗಳು ನೆಲ ಕಚ್ಚಿವೆ. ಅಧಿಕಾರಿಗಳು ತಕ್ಷಣವೇ ಬೆಳೆ ನಷ್ಟದ ಅಂದಾಜು ಸಮೀಕ್ಷೆ ಮಾಡಿ ಪರಿಹಾರ ವಿತರಿಸಬೇಕು. ಬಿರುಗಾಳಿ ಮಳೆಗೆ ಫಸಲು ನಷ್ಟವಾಗಿರುವ ರೈತರ ಸಂಪೂರ್ಣ ಸಾಲಮನ್ನ ಮಾಡಲು ಬ್ಯಾಂಕುಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಚುನಾವಣಾ ಕಣದಲ್ಲಿರುವ ಶೇ.40ರಷ್ಟು ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಹಾಗೂ ಬಂಡವಾಳ ಶಾಹಿ ಕೋಟ್ಯಾಪತಿಗಳು ಕಣದಲಿದ್ದಾರೆ. ಇವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿಗಳ ದಾಖಲಾತಿಗಳು ಮುಂಕುಬೂದಿ ಎರಚಿ ವಂಚಿಸುವ ದಾಖಲಾತಿಗಳಾಗಿರುವ ಕಾರಣ ತಕ್ಷಣವೇ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿ ತನಿಖೆ ನಡೆಸಿ. ತಪ್ಪಿತಸ್ಥರನ್ನು ಚುನಾವಣೆಯ ಸ್ಥಾನದಿಂದ ಹತ್ತು ವರ್ಷಗಳು ವಜಾಗೊಳಿಸಬೇಕು ಎಂದರು.
ಇನ್ನು ಸಾಂಸ್ಕೃತಿಕ ನಾಯಕ ಬಸವಣ್ಣನ ಜಯಂತಿ ಅಂಗವಾಗಿ ಮೈಸೂರಿನಲ್ಲಿ ಮೇ 9ರಂದು ಕಾಯಕ ನಿಷ್ಠೆ ಪ್ರಾಮಾಣಿಕ ಕಾಯಕ ಮಾಡಿರುವ ವ್ಯಕ್ತಿಗಳನ್ನು ಗುರುತಿಸಿ ಕಾಯಕ ಶ್ರೇಷ್ಠ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವಶಂಕರ್ ಬಿಲಿಗೆರೆ, ಕಾಟೂರ್ ಮಹದೇವಸ್ವಾಮಿ, ಸಾತಗಳ್ಳಿ ಬಸವರಾಜ್, ಸುನಿಲ್ ಕುಮಾರ್ ಇದ್ದರು.