ಬೆಂಗಳೂರು: ಮಹಾಮಾರಿ ಕೊರೊನಾಗೆ ಇಂದು ಮತ್ತೊಂದು ಬಲಿಯಾಗಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 5ಕ್ಕೇರಿಕೆಯಾಗಿದೆ.
ಕಲಬುರಗಿಯ 65 ವರ್ಷದ ವೃದ್ಧರೊಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದ್ದು ಕಲಬುರಗಿಯಲ್ಲಿ ಇದು ಎರಡನೇ ಬಲಿಯಾಗಿದೆ. ಇನ್ನು ರಾಜ್ಯದಲ್ಲಿ ಕೊರೊನಾ ಪೀಡಿತರ ಪಟ್ಟಿ ಏರು ಗತಿಯಲ್ಲಿ ಸಾಗುತ್ತಿದ್ದು, ಇಂದು ಮತ್ತೆ 6ಮಂದಿಯಲ್ಲಿ ಸೋಂಕು ದೃಡಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 181ಕ್ಕೆ ಏರಿಕೆಯಾಗಿದೆ.
ಮತ್ತೆ ಕರ್ನಾಟಕದಲ್ಲಿ 6 ಮಂದಿಯಲ್ಲಿ ಕೊರೊನಾ ದೃಢ
ಮಂಗಳವಾರವಷ್ಟೇ ರಾಜ್ಯದಲ್ಲಿ 80 ವರ್ಷದ ವೃದ್ಧೆ ಸೇರಿದಂತೆ ಒಂದೇ ದಿನ 12 ಜನರಿಗೆ ಸೋಂಕು ತಗುಲಿತ್ತು. ಇದೇ ಕಲಬುರಗಿಯಲ್ಲೇ ಮತ್ತೊಂದು ಪ್ರಕರಣ ದಾಖಲಾಗಿದ್ದು, 72 ವರ್ಷದ ವೃದ್ಧೆಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಇವರು ಪೇಷೆಂಟ್ ನಂಬರ್ 175 ರ ಸಂಪರ್ಕಕ್ಕೆ ಬಂದಿದ್ದರು ಎಂದು ಹೇಳಲಾಗುತ್ತಿದೆ, ಉತ್ತರ ಕನ್ನಡದಲ್ಲಿ 26 ವರ್ಷದ ಮಹಿಳೆಯಲ್ಲೂ ವೈರಸ್ ಇರುವುದು ದೃಢವಾಗಿದ್ದು, ಅವರು ದುಬೈನಿಂದ ಭಾರತಕ್ಕೆ ಆಗಮಿಸಿದ್ದ ಸೋಂಕಿತರನ್ನು ಭೇಟಿಯಾಗಿದ್ದರು ಎಂದು ತಿಳಿದು ಬಂದಿದೆ.
ಇತ್ತ ಮಂಡ್ಯದಲ್ಲಿ ಇಂದು 35 ವರ್ಷದ ಮಹಿಳೆಯಲ್ಲಿ ಸೋಂಕು ಕಂಡುಬಂದಿದ್ದು, ಪೇಷೆಂಟ್ ನಂಬರ್ 134 ಮತ್ತು 138ರ ಸಂಪರ್ಕಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ. ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಸೋಂಕು ಪ್ರಕರಣ ದಾಖಲಾಗಿದ್ದು, ದೆಹಲಿಗೆ ತೆರಳಿದ್ದ 23 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ರಾಜಧಾನಿ ಬೆಂಗಳೂರಿನಲ್ಲೂ ಮತ್ತೊಂದು ಸೋಂಕು ಪ್ರಕರಣ ದಾಖಲಾಗಿದ್ದು, ದೆಹಲಿಯಿಂದ ಆಗಮಿಸಿದ್ದ 27 ವರ್ಷದ ಮಹಿಳೆಯಲ್ಲಿ ಸೋಂಕು ದೃಢವಾಗಿದೆ.
ಇದನ್ನೂ ಓದರಿ ಕರ್ನಾಟಕದಲ್ಲಿ ಇಂದು ಮತ್ತೆ 12 ಮಂದಿಯಲ್ಲಿ ಕೊರೊನಾ ಪಾಸಿಟಿವ್
ಅಚ್ಚರಿ ತಂದ ವೃದ್ಧನ ಸಾವು
ಇನ್ನು ಬುಧವಾರ ಕಲಬುರಗಿಯಲ್ಲಿ ಮೃತಪಟ್ಟಿರುವ ವೃದ್ಧ ಯಾವುದೇ ಹಂತದಲ್ಲೂ ಸೋಂಕಿತರೊಂದಿಗೆ ಸಂಪರ್ಕ ಹೊಂದಿರಲಿಲ್ಲ. ಹಣ್ಣಿನ ವ್ಯಾಪಾರಿಯಾದ ವೃದ್ಧನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಬಳಿಕ ಅವರಲ್ಲಿ ಕೊರೊನಾ ಲಕ್ಷಣಗಳು ಕಂಡಬಂದ ಹಿನ್ನೆಲೆಯಲ್ಲಿ ಮಾರ್ಚ್ 6ರಂದು ಕಲಬುರಗಿಯ ಇಎಸ್ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವೃದ್ಧನ ಗಂಟಲಿನ ಎಂಜಲಿನ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ನಿನ್ನೆಯಷ್ಟೇ ಈ ವರದಿ ಬಂದಿದ್ದು, ಕೊರೊನಾ ಸೋಂಕು ದೃಢವಾಗಿತ್ತು. ಇದೀಗ ವೃದ್ಧ ಸಾವನ್ನಪ್ಪಿದ್ದು, ವೃದ್ಧ ತಂಗಿದ್ದ ಮನೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವನ್ನು ರೆಡ್ ಝೋನ್ ಎಂದು ಘೋಷಿಸಲಾಗಿದೆ. ಅಲ್ಲದೆ ವೃದ್ಧನ ಕುಟುಂಬಸ್ಥರು, ಸಂಬಂಧಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನು ವೃದ್ಧನ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಶೋಧ ನಡೆಯುತ್ತಿದ್ದು, ಅವರಿಗೂ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.