ಬಳ್ಳಾರಿ: ಈಗಾಗಲೇ ಜಿಲ್ಲಾ ವಿಪತ್ತು ಪರಿಹಾರ ನಿಧಿ ಮೂಲಕ ಅನೇಕ ವೈದ್ಯಕೀಯ ಪರಿಕರಗಳು ಹಾಗೂ ಅವಶ್ಯಕ ವಸ್ತುಗಳನ್ನು ತರಿಸಿಕೊಳ್ಳಲಾಗಿದೆ. ಇನ್ನೂ ಅವಶ್ಯ ಪರಿಕರಗಳು ಬೇಕಾದಲ್ಲಿ ಮಾಹಿತಿ ಒದಗಿಸಿದರೇ ತಮಗೆ ಒದಗಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೃಹಬಂಧನದಲ್ಲಿರುವ 55 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಯಾರಿಗಾದರೂ ಗಂಭೀರ ರೀತಿಯ ರೋಗಗಳಿಂದ ಬಳಲುತ್ತಿದ್ದರೇ ಅಂತವರ ಮಾಹಿತಿ ಪಡೆದು ಅಂತವರಿಗೆ ವಿಶೇಷ ಚಿಕಿತ್ಸೆ ನೀಡಿ ಎಂದ ಅವರು, ಎಲ್ಲ ರೀತಿಯ ಕೊರೊನಾ ಪಾಸಿಟಿವ್ ಪ್ರಕರಣಗಳ ಚಿಕಿತ್ಸಗೆ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆಯಾಗಿರುವ ಜಿಲ್ಲಾಸ್ಪತ್ರೆಯಲ್ಲಿ ವ್ಯವಸ್ಥೆ ಹಾಗೂ ಸಂಶಯಾಸ್ಪದ ಕೊರೊನಾ ಲಕ್ಷಣಗಳಿರುವ ಮತ್ತು ವರದಿಗಾಗಿ ಕಾಯುತ್ತಿರುವವರನ್ನು ಟಿಬಿ ಸ್ಯಾನಿಟೋರಿಯಂ ನಲ್ಲಿಯೇ ಇರುವುದಕ್ಕೆ ವ್ಯವಸ್ಥೆ ಮಾಡಬೇಕು ಮತ್ತು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಸಂಜೀವಿನಿ ಆಸ್ಪತ್ರೆಯನ್ನು ಸಹ ಕೋವಿಡ್ ಸೊಂಕಿತರ ಚಿಕಿತ್ಸೆಗಾಗಿ ಮೀಸಲಿಡಲಾಗಿದ್ದು, ಅಲ್ಲಿ ಗಂಭೀರ ಚಿಕಿತ್ಸೆ ಪಡೆಯುತ್ತಿರುವವರನ್ನು ವಿಮ್ಸ್ಗೆ ಹಾಗೂ ಸಾಮಾನ್ಯ ಚಿಕಿತ್ಸೆಗಾಗಿ ಸಂಡೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ವ್ಯವಸ್ಥೆ ಪಡೆಯುವುದಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಒಪಿಜೆ ಸಂಜೀವಿನಿ ಆಸ್ಪತ್ರೆ ಎದುರುಗಡೆ ರೋಗಿಗಳನ್ನು ವಿಮ್ಸ್ ಮತ್ತು ಸಂಡೂರು ತಾಲೂಕು ಆಸ್ಪತ್ರೆಗೆ ಕಳುಹಿಸುವುದಕ್ಕೆ ಅಂಬ್ಯುಲೆನ್ಸ್ ಸದಾ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದರು.
ರ್ಯಾಪಿಡ್ ಟೆಸ್ಟ್ ಮಶೀನ್ಗಳು ಏ.12ರಂದು ಜಿಲ್ಲೆಗೆ ಬರಲಿದ್ದು, ಅವುಗಳಿಂದ ಪರೀಕ್ಷಿಸುವುದಕ್ಕೆ ಸಂಬಂಧಿಸಿದಂತೆ ಕ್ವಾರಂಟೈನ್ನ ವೈದ್ಯರು ಹಾಗೂ ಫೀವರ್ ಕ್ಲಿನಿಕ್ನಲ್ಲಿರುವ ವೈದ್ಯರಿಗೆ ತರಬೇತಿ ಕೊಡಿಸಿ ಎಂದು ಡಿಸಿ ನಕುಲ್ ಸೂಚಿಸಿದರು.
ದಾನಿಗಳ ನೆರವಿನಿಂದ ಫರ್ಫೆಕ್ಟ್ ಕಿಟ್ನನ್ನು ಹೋಮ್ ಕ್ವಾರಂಟೈನ್ನಲ್ಲಿರುವವರಿಗೆ ನೀಡಲಾಗುತ್ತಿದ್ದು, ಐಸೋಲೇಶನ್ ವಾರ್ಡ್ನಲ್ಲಿರುವವರಿಗೂ ಒದಗಿಸಲಾಗುವುದು ಎಂದು ಜಿಪಂ ಸಿಇಒ ಕೆ.ನಿತೀಶ್ ಸಭೆಯಲ್ಲಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿದರು. ಡಿಎಚ್ಒ ಡಾ.ಜನಾರ್ಧನ್, ಜಿಲ್ಲಾ ಶಸ್ತ್ರಚಿಕಿತ್ಸಕ ಬಸರೆಡ್ಡಿ, ವಿಮ್ಸ್ ನಿರ್ದೇಶಕ ಡಾ.ದೇವಾನಂದ ಸೇರಿದಂತೆ ಅನೇಕರು ಇದ್ದರು.