ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಅನ್ನುವ ಸಂತ್ರಸ್ತೆಯನ್ನು ಅಪಹರಣ ಮಾಡಿದ್ದರು ಎಂಬ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಶಾಸಕರು- ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರಿದ್ದ ಪೀಠ 5 ಲಕ್ಷ ರೂ.ಗಳ ಬಾಂಡ್, ಇಬ್ಬರು ಶ್ಯೂರಿಟಿ, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ಎಸ್‌ಐಟಿ ತನಿಖೆಗೆ ಸಹಕರಿಸಬೇಕು ಎಂಬ ಷರತ್ತಿನೊಂದಿಗೆ ಜಾಮೀನು ಮಂಜೂರು ಮಾಡಿದೆ.
ಇಂದು (ಸೋಮವಾರ) ಬೆಳಗ್ಗೆಯಿಂದ ಸಂಜೆಯವರೆಗೆ ಕೋರ್ಟ್ ಸುದೀರ್ಘ ವಿಚಾರಣೆ ನಡೆಸಿತು. ವಿಶೇಷ ತನಿಖಾ ತಂಡ (SIT) ಪರ ವಕೀಲರು ರೇವಣ್ಣ ಪ್ರಭಾವಿಯಾಗಿದ್ದು ಸಾಕ್ಷ್ಯ ನಾಶ ಮಾಡುವ ಆತಂಕವಿದೆ ಯಾವುದೇ ಕಾರಣಕ್ಕೂ ಜಾಮೀನು ಮಂಜೂರು ಮಾಡಬಾರದು ಎಂದು ವಾದಿಸಿದರು.
ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆ ವಿಧಿಸುವ ಅಪರಾಧ ಇದ್ದರೆ ಜಾಮೀನು ತಿರಸ್ಕರಿಸಬಹುದು. ಆದರೆ ನನ್ನ ಕಕ್ಷಿದಾರ ರೇವಣ್ಣ ಪ್ರಕರಣದಲ್ಲಿ ಇಲ್ಲಿ ಯಾವುದೇ ಸತ್ಯ ಮತ್ತು ಸಾಂದರ್ಭಿಕ ಸಾಕ್ಷಿಗಳಿಲ್ಲ. ರೇವಣ್ಣ ಮನೆಯಲ್ಲಿ ಮಹಿಳೆ 10 ವರ್ಷಗಳು ಕೆಲಸ ಮಾಡಿದ್ದಾರೆ. ಹೀಗಾಗಿ ಯಾವುದೇ ಅಪಹರಣ ಮಾಡಿಲ್ಲ. ಜಾಮೀನು ನೀಡಬಹುದು ಎಂದು ರೇವಣ್ಣ ಪರ ವಕೀಲ ನಾಗೇಶ್ ವಾದಿಸಿದರು.
ಎರಡು ಕಡೆಯ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಸಂಜೆ 4 ಗಂಟೆಗೆ ವಿಚಾರಣೆ ಪೂರ್ಣಗೊಳಿಸಿ ಸಂಜೆ 6:30ಕ್ಕೆ ಆದೇಶ ಪ್ರಕಟಿಸಿದರು.
ಮೇ 8 ರಂದು ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯ 7 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತ್ತು. ಈ ಆದೇಶದ ಅನ್ವಯ ರೇವಣ್ಣ ಪರಪ್ಪನ ಅಗ್ರಹಾರಕ್ಕೆ ವಿಚಾರಣಾಧೀನ ಕೈದಿಯಾಗಿ ಹೋಗಿದ್ದರು. ಮಂಗಳವಾರ ಸಂಜೆ ರೇವಣ್ಣ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.