ಮೈಸೂರು: 20 ದಿನದೊಳಗೆ ಬರ ಪರಿಹಾರ ರೈತರಿಗೆ ನ್ಯಾಯಯುತವಾಗಿ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ರೈತರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಬರ ಹಾಗೂ ಮಳೆ ಹಾನಿ ಬೆಳೆ ನಷ್ಟ ಪರಿಹಾರ ನ್ಯಾಯಯುತವಾಗಿ ನೀಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಎಲ್ಲ ಬೆಳೆಗಳಿಗೂ ಬೆಳೆ ವಿಮೆ ಜಾರಿ ಮಾಡಿ ಈ ಮೂಲಕ ವಿಮಾ ಪರಿಹಾರ ಕೊಡಿಸಲಿ. ನಾಟಕೀಯವಾಗಿ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದು ಬೇಡ ಎಂದು ಹೇಳಿದರು.
ರಾಜ್ಯದ ಎಲ್ಲ ಕೆರೆಗಳ ಹೂಳು ತೆಗೆಸಿ ರೈತರ ಜಮೀನುಗಳಿಗೆ ಸರಬರಾಜು ಮಾಡಿ ಭೂಮಿ ಫಲವತ್ತತೆಗೆ ಒತ್ತು ನೀಡಲು ಕಾರ್ಯ ಯೋಜನೆ ರೂಪಿಸಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾವೇರಿ ಅಚ್ಚುಕಟ್ಟು ಭಾಗದಲ್ಲಿ ಮಳೆ ಕಡಿಮೆಯಾಗಿರುವ ಕಾರಣ ನಾಲೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ ಯಾರು ಬೆಳೆ ಬೆಳೆಯಬಾರದು ಎಂದು ಅಧಿಸೂಚನೆ ಹೊರಡಿಸಿದ ಸರ್ಕಾರ ಈ ಭಾಗದ ಎಲ್ಲ ತಾಲೂಕು ಬರಗಾಲ ಎಂದು ಘೋಷಣೆ ಮಾಡಿದೆ. ಇದೇ ಸರ್ಕಾರ ಬರಗಾಲದ ಬೆಳೆ ನಷ್ಟ ಅಂದಾಜು ಸಮೀಕ್ಷೆ ಮಾಡಿ ವರದಿ ಕಳಿಸಿ ಎಂದು ಸೂಚಿಸಿದೆ. ಈ ಕಾರಣ ಕಾವೇರಿ ಅಚ್ಚುಕಟ್ಟು ಭಾಗದ ಬಹುತೇಕ ರೈತರಿಗೆ ಬರ ಪರಿಹಾರ ನಷ್ಟ ಸಿಕ್ಕಿಲ್ಲ ಇದು ಸರ್ಕಾರದ ಇಬ್ಬಗೆ ನೀತಿಯಾಗಿದೆ ಎಂದು ಕಿಡಿಕಾರಿದರು.
ಜಿಲ್ಲೆಯಾದ್ಯಂತ ಮಳೆ ಹಾಗೂ ಬಿರುಗಾಳಿಯಿಂದ ಹಾನಿಯಾಗಿರುವ ರೈತರ ದನ ಕರು ಕೊಟ್ಟಿಗೆ, ಕೋಳಿ ಫಾರಂ, ಬಾಳೆ ಬೆಳೆ, ತರಕಾರಿ ಬೆಳೆಗಳಿಗೆ ವಿಪ್ಪತು ನಿರ್ವಹಣಾ ಪ್ರಾಧಿಕಾರದಿಂದ ಕೂಡಲೆ ನಷ್ಟ ಪರಿಹಾರ ಬಿಡುಗಡೆಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಎನ್‌ಆರ್‌ಇಜಿ ಇಂದ ಕೆಲಸ ಮಾಡಿದ ಕಾರ್ಮಿಕರಿಗೆ ಮೂರು ತಿಂಗಳಾದರೂ ಹಣ ಬಿಡುಗಡೆಯಾಗಿಲ್ಲ. ಖಾಸಗಿ ಫೈನಾನ್ಸ್‌ಗಳು ಸಾಲ ವಸುಲಾತಿಗಾಗಿ ಖಾಸಗಿ ಗೂಂಡಾಗಳ ಬಲ ಪ್ರಯೋಗ ಮಾಡುತ್ತಿರುವುದನ್ನು ನಿಲ್ಲಿಸಲು ಸರ್ಕಾರ ಮತ್ತು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು.
ಸಭೆಯಲ್ಲಿ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಕಿರಗಸೂರ ಶಂಕರ್, ಉಡಿಗಾಲ ರೇವಣ್ಣ, ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ, ಬಿ.ಪಿ. ಪರಶಿವಮೂರ್ತಿ, ಕುರುಬೂರ್ ಸಿದ್ದೇಶ್, ಲಕ್ಷ್ಮಿಪುರ ವೆಂಕಟೇಶ್, ದೇವನೂರು ವಿಜೇಂದ್ರ, ರಾಜೇಶ, ಸುನೀಲ್, ಅಂಬಳೆ ಮಂಜುನಾಥ, ರೂಪಾ ಸೇರಿದಂತೆ ನೂರಾರು ರೈತರು, ರೈತ ಮಹಿಳೆಯರು ಇದ್ದರು.