ಮಳೆಗೆ ಸೋರುತ್ತಿರುವ ಬಿಎಂಟಿಸಿ ಬನಶಂಕರಿ ಟಿಟಿಎಂಸಿ!!
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬನಶಂಕರಿ ಟಿಟಿಎಂಸಿ ಬಸ್ ನಿಲ್ದಾಣ ಮಳೆಗೆ ಸೋರುತ್ತಿದೆ.
ಈ ವೇಳೆ ಸಾರ್ವಜನಿಕರು ಕುಳಿತುಕೊಳ್ಳುವುದಿರಲಿ ನಿಲ್ಲುವುದಕ್ಕೂ ಆಗುತ್ತಿಲ್ಲ. ಸಾರಿಗೆ ಸಚಿವರು ಮತ್ತು ಅಧಿಕಾರಿಗಳಿಗೆ ಈ ಬಗ್ಗೆ ಕಾಳಜಿಯೇ ಇಲ್ಲವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ರಾಜಧಾನಿಗೆ ದೇಶ ವಿದೇಶದಿಂದ ಲಕ್ಷಾಂತರ ಮಂದಿ ಬಂದು ನೆಲೆಸಿದ್ದಾರೆ. ಆದರೆ, ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಳೆ ಬಂದರೆ ಕುಳಿತುಕೊಳ್ಳುವುದಕ್ಕೂ ಆಗದ ಪರಿಸ್ಥಿತಿ ಎದುರಾಗಿದೆ.
ಈ ಬಗ್ಗೆ ವಿದೇಶದಿಂದ ಪ್ರವಾಸಕ್ಕೆ ಬಂದು ಹೋಗುವ ವಿದೇಶಿಗರ ಮನಸ್ಸಿನಲ್ಲಿ ಯಾವ ರೀತಿಯ ಭಾವನೆ ಮೂಡುತ್ತದೆ ಎಂಬ ಅರಿವು ಕೂಡ ಇಲ್ಲದವರಂತೆ ಅಧಿಕಾರಿಗಳು ಮತ್ತು ಸರ್ಕಾರ ನಡೆದುಕೊಳ್ಳುತ್ತಿರುವುದುವು ಭಾರಿ ಖೇದಕರ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗ ಮಳೆಗಾಲ ಆರಂಭವಾಗಿದ್ದು ಇನ್ನುಮೇಲಾದರು ಈ ರೀತಿ ನಿಲ್ದಾಣಗಳು ಸೋರದಂತೆ ಅದರಲ್ಲೂ ಟಿಟಿಎಂಸಿಗಳಲ್ಲಿ ಇಂಥ ಆವಂತರಗಳು ಆಗದಂತೆ ನೋಡಿಕೊಳ್ಳಬೇಕಿದೆ ಎಂದು ನಾಗರಿಕರು ಸಲಹೆ ನೀಡಿದ್ದಾರೆ.
ಇತ್ತೀಚೆಗೆ ಮಳೆಗೆ ಬಿಎಂಟಿಸಿ ಜಯನಗರ 4ನೇ ಘಟಕದ ಬಸ್ ಸೋರುತ್ತಿದ್ದರ ಬಗ್ಗೆ ಪ್ರಯಾಣಿಕರೊಬ್ಬರು ಫೋಟೋ ತೆಗೆದು ವಿಜಯಪಥ ಕಚೇರಿಗೆ ಕಳುಹಿಸಿದ್ದರು. ಈ ಬಗ್ಗೆ ವರದಿ ಬಂದ ಬಳಿಕ ಬಸ್ ಸೋರದಂತೆ ಮಾಡಿದ್ದಾರೆ.
ಇನ್ನು ಈ ರೀತಿ ಸೋರುತ್ತಿರುವ ಬಸ್‌ಗಳನ್ನು ಆಯಾಯ ಡಿಪೋ ವ್ಯವಸ್ಥಾಪಕರು ಸಂಬಂಧ ಪಟ್ಟವರಿಗೆ ನೋಡಿಕೊಳ್ಳುವಂತೆ ಸೂಚನೆ ನೀಡಿ ಮಾರ್ಗಕ್ಕೆ ಇಳಿಯುವ ಮುನ್ನವೇ ಸರಿಪಡಿಸಬೇಕು ಎಂದು ಜನತೆ ಆಗ್ರಹಿಸಿದ್ದರು.