ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘದ ಚುನಾವಣೆ ಜುಲೈ 7ರಂದು ನಡೆಸಲಾಗುವುದು ಎಂದು ರಾಜ್ಯ ಸರ್ಕಾರದ ಸಹಕಾರ ಚುನಾವಣಾ ಪ್ರಾಧಿಕಾರ ಘೋಷಿಸಿದ ಬೆನ್ನಲ್ಲೇ ನೌಕರರ ಪರ ಸಂಘಟನೆಗಳು ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸುತ್ತಿವೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಚುನಾವಣೆ ಸಂಬಂಧ ಪದಾಧಿಕಾರಿಗಳ ಸಭೆಯನ್ನು ನೆಸುತ್ತಿದ್ದು, ಯಾರನ್ನು ನಿರ್ದೇಶಕ ಸ್ಥಾನಕ್ಕೆ ಅಭ್ಯರ್ಥಿಯಾಗಿ ನಿಲ್ಲಿಸಬೇಕು ಎಂಬ ಚರ್ಚೆಯಲ್ಲಿ ತೊಡಗಿದ್ದಾರೆ. ಇನ್ನೊಂದೆಡೆ ಅಭ್ಯರ್ಥಿಗಳಾಗುವುದಕ್ಕೆ ಕೆಲವರು ತಮ್ಮ ಆಪ್ತರ ಮೂಲಕ ಸಂಘಟನೆಗಳ ಮುಂಡರಿಗೆ ಒತ್ತಡ ಹೇರುತ್ತಿದ್ದಾರೆ.
ಒಂದು ರೀತಿ ಇದುಕೂಡ ಯಾವುದೇ ರಾಜಕೀಯ ಚುನಾವಣೆಗಿಂತ ಕಡಿಮೆ ಇಲ್ಲ ಎಂಬಂತೆ ಜಿದ್ದಾಜಿದ್ದಿನಲ್ಲಿ ಹೋರಾಟಕಕ್ಕೆ ಅಣಿಯಾಗುತ್ತಿದ್ದಾರೆ. ಇದಕ್ಕಾಗಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಂಘಟನೆ – ಸಂಘಟನೆಗಳ ಪದಾಧಿಕಾರಿಗಳು ನಡುವೆ ಒಬ್ಬರಿಗೊಬ್ಬರು ಕಾಲೆಳೆದುಕೊಳ್ಳುತ್ತಿದ್ದಾರೆ.
ಇನ್ನು ಸಹಕಾರ ಸಂಘಕ್ಕೆ ಚುನಾವಣೆ ನಡೆದು 5 ವರ್ಷಗಳು ಕಳೆದಿರುವುದರಿಂದ ಮತ್ತೆ 5ವರ್ಷದ ಅವಧಿಗೆ ಆಡಳಿತ ಮಂಡಳಿಯ ಚುನಾವಣೆಯನ್ನು ಜುಲೈ 7ರ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 4ಗಂಟೆಯವರೆಗೆ ಮತದಾನವನ್ನು “ಭಾರತ್ ಎಜುಕೇಷನಲ್ ಸೊಸೈಟಿ, 16ನೇ ಮುಖ್ಯರಸ್ತೆ, 4ನೇ ಬ್ಲಾಕ್, ಜಯನಗರ, ಬೆಂಗಳೂರು-560011” ರಲ್ಲಿ ನಡೆಸುತ್ತಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘದ ಆಡಳಿತ ಮಂಡಳಿಯ 19 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಅದರಲ್ಲಿ 13 ಸಾಮಾನ್ಯ, ಒಂದು ಸ್ಥಾನ ಪರಿಶಿಷ್ಟ ಜಾತಿ ಮೀಸಲು, ಒಂದು ಸ್ಥಾನ ಪರಿಶಿಷ್ಟ ಪಂಗಡ ಮೀಸಲು, ಎರಡು ಸ್ಥಾನ ಮಹಿಳಾ ಮೀಸಲು, ತಲಾ ಒಂದೊಂದು ಹಿಂದುಳಿದ ವರ್ಗ ಎ ಮತ್ತು ಬಿ ಸ್ಥಾನಗಳೀಗೆ ಅಂದರೆ ಒಟ್ಟು 19 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಇದೇ ಜೂನ್27ರಿಂದ ಉಮೇದುವಾರಿಕೆ ಸಲ್ಲಿಸಬಹುದಾಗಿದ್ದು, ಜೂನ್29 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಬೆಳಗ್ಗೆ 11ಗಂಟೆಯಿಂದ ಸಂಜೆ 5ಗಂಟೆ ವರೆಗೂ ನಾಮಪತ್ರ ಸಲ್ಲಿಸಬಹುದು.
ಜೂನ್30ರಂದು ನಾಮಪತ್ರ ಪರಿಶೀಲನೆ ಮಾಡಲಾಗುವುದು ಮತ್ತು ಅಂದೇ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು. ಇನ್ನು ಜಯಲೈ 1 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯದಿನವಾಗಿದ್ದು, ಅಂದು ಮಧ್ಯಾಹ್ನ 3ಗಂಟೆಯೊಳಗೆ ನಾಮಪತ್ರ ಹಿಂತೆಗೆದುಕೊಳ್ಳಬಹುದು.
ಜುಲೈ 1ರ 3ಗಂಟೆ ಬಳಿಕ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಚುನಾವಣೆ ಚಿಹ್ನೆಗಳ ಹಂಚಿಕೆ ಮತ್ತು ಅಂದೆ ಪ್ರಕಟ ಮಾಡಲಾಗುವುದು ಎಂದು ಸಹಕಾರ ಚುನಾವಣಾ ಪ್ರಾಧಿಕಾರ ತಿಳಿಸಿದೆ. ಇನ್ನು ಜುಲೈ 7ರಂದು ಚುನಾವಣೆ ನಡೆಯಲಿದ್ದು ಅಂದೇ ಮತ ಎಣಿಕೆ ಕೂಡ ನಡೆಸಲಾಗುವುದು ಬಳಿಕ ರಿಟರ್ನಿಂಗ್‌ಅಧಿಕಾರಿ ಫಲಿತಾಂಶ ಪ್ರಕಟಿಸಲಿದ್ದಾರೆ ಎಂದು ತಿಳಿಸಿದೆ.