ಬೆಂಗಳೂರು: ರಾಜ್ಯದಲ್ಲಿ ಇಂದು ಬೆಳಗ್ಗೆ 7 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ , ಮೈಸೂರಿನಲ್ಲಿ 5 ಮಂದಿಗೆ ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 214 ಕ್ಕೆ ಏರಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಇಂದು ಕೋವಿಡ್-19 ಕುರಿತು ಹಮ್ಮಿಕೊಂಡಿದ್ದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದ ಸಿಎಂ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಾರಂಭದಲ್ಲಿ ಕೋವಿಡ್ 19 ಪ್ರಕರಣಗಳು ವರದಿಯಾದ ರಾಜ್ಯಗಳಲ್ಲಿ 3ನೇ ಸ್ಥಾನದಲ್ಲಿದ್ದ ಕರ್ನಾಟಕವು ಈಗ 11ನೇ ಸ್ಥಾನದಲ್ಲಿದೆ. ಲಾಕ್ ಡೌನ್ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು ನಗರದಲ್ಲಿ 345 ಚೆಕ್ ಪೋಸ್ಟ್ ಗಳು ಹಾಗೂ ಇತರ ಜಿಲ್ಲೆಗಳ ಗಡಿ ಭಾಗ ಹಾಗೂ ಅಂತರ್ ರಾಜ್ಯ ಗಡಿ ಭಾಗಗಳಲ್ಲಿ 588 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ವಾಹನಗಳ ಓಡಾಟವನ್ನು ನಿಯಂತ್ರಿಸಲಾಗುತ್ತಿದೆ ಎಂದರು.
ಈ ವರೆಗೆ 43,432 ವಾಹನಗಳಲ್ಲಿ ಜಪ್ತಿ ಮಾಡಿಕೊಳ್ಳಲಾಗಿದೆ. ಲಾಕ್ ಡೌನ್ ಉಲ್ಲಂಘನೆಗೆ ಸಂಬಂಧಿಸಿದಂತೆ 1558 ಎಫ್ ಐ ಆರ್ ಗಳು ದಾಖಲಾಗಿವೆ. 2,682 ಜನರನ್ನು ಬಂಧಿಸಲಾಗಿದೆ. ತಬ್ಲಿಘಿ ಜಮಾತ್ ನ 50 ವಿದೇಶಿ ಕಾರ್ಯಕರ್ತರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ವೀಸಾ ನಿಯಮ ಉಲ್ಲಂಘನೆಯ ಪ್ರಕರಣಗಳನ್ನೂ ದಾಖಲಿಸಲಾಗಿದೆ ಎಂದು ವಿವರಿಸಿದರು.
ಬೆಂಗಳೂರು ನಗರದಲ್ಲಿ 269 ತೆಬ್ಲಿಘಿ ಜಮಾತ್ ನ ಕಾರ್ಯಕರ್ತರು ಹಾಗೂ ಇತರಜಿಲ್ಲೆಗಳಲ್ಲಿ 482 ಕಾರ್ಯಕರ್ತರನ್ನು ಗುರುತಿಸಲಾಗಿದೆ. ಒಟ್ಟು 801 ಕಾರ್ಯಕರ್ತರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ಹೇಳಿದರು.
ಇತರ ರಾಜ್ಯಗಳಲ್ಲಿರುವ 581 ಮಂದಿ ಕಾರ್ಯಕರ್ತರ ಕುರಿತು ಆಯಾ ರಾಜ್ಯಗಳಿಗೆ ಮಾಹಿತಿ ನೀಡಲಾಗಿದೆ. ಬೆಂಗಳೂರು ನಗರ ಮತ್ತು ಇತರ ಆಯುಕ್ತಾಲಯಗಳ ವ್ಯಾಪ್ತಿಯಲ್ಲಿ 273 ಹೊಯ್ಸಳ ವಾಹನಗಳು ನಾಗರಿಕರಿಗೆ ವೈದ್ಯಕೀಯ ಮತ್ತು ಇತರ ತುರ್ತು ಸಂದರ್ಭಗಳಲ್ಲಿ ನೆರವಾಗುತ್ತಿವೆ ಎಂದು ಹೇಳಿದರು.