ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಆ.20 ಅಂದರೆ ಇಂದಿನಿಂದ ಒಟ್ಟು ಐದು ದಿನಗಳು ಮೆಟ್ರೋ ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಹಸಿರು ಮಾರ್ಗದ ನಾಗಸಂದ್ರದಿಂದ ಮಾದಾವರವರೆಗಿನ ವಿಸ್ತೃತ ಮಾರ್ಗದಲ್ಲಿ ಸಿಗ್ನಲಿಂಗ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈ ಹಿನ್ನೆಲೆ ಪೀಣ್ಯ ಇಂಡಸ್ಟ್ರಿ-ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ 5 ದಿನಗಳು ರೈಲು ಸಂಚಾರ ಸಂಪೂರ್ಣ ಬಂದ್ ಆಗಲಿದೆ ಎಂದು ತಿಳಿಸಿದೆ.
ಯಾವೆಲ್ಲ ನಿಲ್ದಾಣಗಳ ನಡುವೆ ಸಂಚಾರ ಇರಲ್ಲ?: ನಿಗದಿತ ದಿನಗಳಂದು ಹಸಿರು ಮಾರ್ಗದಲ್ಲಿ ರೈಲು ರೇಷ್ಮೆ ಮಂಡಳಿಯಿಂದ ಆರಂಭವಾಗಿ ಪೀಣ್ಯ ಇಂಡಸ್ಟ್ರಿವರೆಗೂ ಮಾರ್ಗ ಮಾತ್ರ ಸಂಚಾರ ನಡೆಸಲಿವೆ. ಆ ಬಳಿಕ ಬರುವ ಜಾಲಹಳ್ಳಿ, ದಾಸರಹಳ್ಳಿ ಹಾಗೂ ನಾಗಸಂದ್ರ ನಿಲ್ದಾಣಗಳಿಗೆ ರೈಲು ಸೇವೆ ಇರಲ್ಲ.
ಒಟ್ಟಾರೆ ಪೀಣ್ಯ ಇಂಡಸ್ಟ್ರಿಯಿಂದ ನಾಗಸಂದ್ರ ನಡುವೆ 4 ನಿಲ್ದಾಣಗಳ ನಡುವೆ 5 ದಿನ ಸಂಚಾರ ಬಂದ್ ಆಗಲಿದೆ. ಆಗಸ್ಟ್ 24ರಂದು ಒಂದು ಗಂಟೆ ವ್ಯತ್ಯಯ. ಆಗಸ್ಟ್ 24 ರಂದು ನಾಗಸಂದ್ರದಿಂದ ರಾತ್ರಿ 11.05 ರ ಬದಲಾವಣೆ 10 ಗಂಟೆಗೆ ಕೊನೆಯ ರೈಲು ಹೊರಡಲಿದೆ. ಅಂದರೆ, ಒಂದು ಗಂಟೆ ಬೇಗ ಸೇವೆ ಕೊನೆಗೊಳಿಸಲಾಗುತ್ತಿದೆ.
ಇನ್ನು ಆಗಸ್ಟ್ 25 ರಂದು ನಾಗಸಂದ್ರದಿಂದ ರೈಲು ಬೆಳಗ್ಗೆ 5 ಗಂಟೆಯ ಬದಲಾಗಿ 6 ಗಂಟೆಗೆ ಆರಂಭವಾಗಲಿದೆ. ಇದೇ ದಿನಗಳಂದು ಪೀಣ್ಯ ಇಂಡಸ್ಟ್ರಿಯಿಂದ ಎಂದಿನಂತೆ ಸೇವೆ ಇರಲಿದೆ. ಅಂದರೆ, ಆಗಸ್ಟ್ 24 ರಂದು ಕೊನೆಯ ರೈಲು ಪೀಣ್ಯ
ಇಂಡಸ್ಟ್ರಿಯಿಂದ ರಾತ್ರಿ 11.12 ಕ್ಕೆ ಹೊರಡಲಿದೆ. ಆಗಸ್ಟ್ 25 ಕ್ಕೆ ಮೊದಲ ರೈಲು ಬಳಗ್ಗೆ 5 ಕ್ಕೆ ಆರಂಭವಾಗಲಿದೆ.
ನೇರಳೆ ಮಾರ್ಗದಲ್ಲಿ ವ್ಯತ್ಯಯ ಇಲ್ಲ!: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ರೈಲುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇಲ್ಲ. ಅಲ್ಲದೇ, ಹಸಿರು ಮಾರ್ಗದ ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಮಂಡಳಿವರೆಗೂ ರೈಲುಗಳ ಸಂಚಾರದಲ್ಲಿ ಸಮಸ್ಯೆ ಇಲ್ಲ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ನಾಗಸಂದ್ರ-ಮಾದಾವರ ಪ್ರಾಯೋಗಿಕ ಸಂಚಾರ: ನಮ್ಮ ಮೆಟ್ರೋ ನಾಗಸಂದ್ರ ಮಾದಾವರ ನಡುವೆ ಭಾನುವಾರದಿಂದ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಸದ್ಯ ಈ ಮಾರ್ಗವನ್ನು ಸೆಪ್ಟೆಂಬರ್‌ನಲ್ಲಿ ಆರಂಭಿಸಬೇಕು ಎಂದು ಅಗತ್ಯ ಸಿದ್ಧತೆ ನಡೆಸಲಾಗುತ್ತಿದೆ. ಸಿಗ್ನಲಿಂಗ್ ಕೆಲಸ ಬಾಕಿ ಇದ್ದು, ಅವುಗಳನ್ನು ಪೂರ್ಣಗೊಳಿಸಲು ಕೆಲ ನಿಲ್ದಾಣಗಳ ನಡುವೆ ರೈಲು ಸಂಚಾರ ರದ್ದು ಮಾಡಲಾಗುತ್ತಿದೆ.